ಕಾಸರಗೋಡು: ನಗರಸಭಾ ವ್ಯಾಪ್ತಿಯಲ್ಲಿ ಬೀದಿ ದೀಪಗಳು ಕೆಟ್ಟು ತಿಂಗಳುಗಳು ಕಳೆದರೂ ದುರಸ್ತಿ ಕಾರ್ಯ ಕೈಗೊಳ್ಳದೆ ಸಾರ್ವಜನಿಕರನ್ನು ನಗರಸಭಾ ಆಡಳಿತ ಕತ್ತಲೆಯಲ್ಲಿರಿಸಿದೆಯೆಂದು ಬಿಜೆಪಿ ನಗರಸಮಿತಿ ಆಕ್ರೋಶಿಸಿದೆ. ನಗರದ ಪ್ರಮುಖ ರಸ್ತೆಗಳು ಸೇರಿದಂತೆ ಬಹುತೇಕ ವಾರ್ಡ್‌ಗಳಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲವೆಂದು ಬಿಜೆಪಿ ದೂರಿದ್ದು, ಇದರಿಂದ ರಾತ್ರಿ ವೇಳೆ ಜನಸಾಮಾನ್ಯರು, ಮಹಿಳೆಯರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಭಯದಿಂದ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳ್ಳತನ, ಅಪಘಾತ, ಬೀದಿ ನಾಯಿಗಳು ಆವಳಿ ಹೆಚ್ಚುತ್ತಿದ್ದರೂ ನಗರಸಭಾ ಆಡಳಿತ ಕಣ್ಮುಚ್ಚಿ ಕುಳಿತಿದೆಯೆಂದು ಬಿಜೆಪಿ ದೂರಿದೆ.
ಈ ಬಗ್ಗೆ ಪ್ರಶ್ನಿಸಿದರೆ ಈ ಹಿಂದೆ ಬೀದಿ ದೀಪ ದುರಸ್ತಿ ಮಾಡಿದ ಗುತ್ತಿಗೆದಾರರಿಗೆ ೪೦ ಲಕ್ಷ ರೂ. ನೀಡಲು ಬಾಕಿ ಉಳಿದಿದೆ. ಇದನ್ನು ತೀರಿಸಲು ನಮ್ಮಿಂದ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹಾರಕ್ಕೆ ಇನ್ನೂ ಸಮಯ ಬೇಕಾಗಬಹುದೆಂದು ಆಡಳಿತ ಪಕ್ಷ ಉತ್ತರ ನೀಡುತ್ತಿದೆಯೆಂದು ಬಿಜೆಪಿ ದೂರಿದೆ. ಸ್ಥಳೀಯ ಕೌನ್ಸಿಲರ್‌ಗಳು ತಮ್ಮ ಕೈಯಿಂದ ಹಣವೆಚ್ಚ ಮಾಡಿ ಸಾರ್ವಜನಿಕರಿಂದ ದೇಣಿಗೆ ಪಡೆದು ಬೀದಿ ದೀಪ ದುರಸ್ತಿ ಮಾಡಬೇಕಾದ ನಾಚಿಕೆಗೇಡಿನ ಪರಿಸ್ಥಿತಿ ನಗರಸಭೆಯಲ್ಲಿ ಸೃಷ್ಟಿಯಾಗಿದೆಯೆಂದು ಮುಖಂಡರು ದೂರಿದ್ದಾರೆ. ಸಾರ್ವಜನಿಕರು ನೀಡುವ ತೆರಿಗೆ ಹಣದಿಂದ ಸಮರ್ಪಕ ಮೂಲ ಸೌಕರ್ಯ ಕಲ್ಪಿಸಬೇಕಾಗಿರುವುದು ಆಡಳಿತದ ಕರ್ತವ್ಯವಾಗಿದ್ದು, ಇದರಲ್ಲಿ ನಗರಸಭಾ ಆಡಳಿತ ನಿರ್ಲಕ್ಷ್ಯ ವಹಿಸುತ್ತಿದೆಯೆಂದು ಬಿಜೆಪಿ ದೂರಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ದೊಂದಿ ಮೆರವಣಿಗೆ ಪ್ರತಿಭಟನೆ ನಡೆಸಲಾಗಿದೆ.






