ಮವ್ವಾರು: ರಾತ್ರಿ ಕಾಲಗಳಲ್ಲಿ ಜನರ ಸಂಚಾರಕ್ಕೆ ಬೆಳಕು ಲಭಿಸಲೆಂಬ ಉದ್ದೇಶದಿಂದ ರಸ್ತೆ ಬದಿಗಳಲ್ಲಿ ಸ್ಥಾಪಿಸುವ ಬೀದಿ ದೀಪಗಳು ಕಣ್ಮುಚ್ಚಿ ಕುಳಿತು ಉದ್ದೇಶವನ್ನೇ ಬುಡಮೇಲು ಗೊಳಿಸುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.
ಕುಂಬಳೆ-ಮುಳ್ಳೇರಿಯ ರಸ್ತೆ ಕೆಎಸ್‌ಟಿಪಿ ವತಿಯಿಂದ ದುರಸ್ತಿ ಗೊಳಿಸಿ ಉತ್ತಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದೇ ವೇಳೆ ರಸ್ತೆ ಬದಿಯಲ್ಲಿ ವಿದ್ಯುತ್ ದೀಪ ಗಳನ್ನು ಕೂಡಾ ಅಳವಡಿಸಲಾಗಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ಈ ವಿದ್ಯುತ್ ದೀಪಗಳು ರಾತ್ರಿ ವೇಳೆ ಉರಿಯದೆ ಜನರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಮವ್ವಾರು ವಿಶ್ವಕರ್ಮ ಭಜನಾ ಮಂದಿರ ಪರಿಸರದಲ್ಲಿ ಕಳೆದ ಮೂರು ತಿಂಗಳಿಂದ ವಿದ್ಯುತ್ ದೀಪ ಉರಿಯದೆ ಸ್ಥಳೀಯರಿಗೆ ಸಮಸ್ಯೆ ಉಂಟುಮಾಡಿದೆ. ಹಲವು ಬಾರಿ ಸಂಬಂಧಪಟ್ಟವರಿಗೆ ಕರೆ ಮಾಡಿ ವಾರ್ಡ್ ಪ್ರತಿನಿಧಿ ಸಹಿತ ಜನರು ಸೂಚಿಸಿದರೂ ಪರಿಹಾರ ಮಾತ್ರ ಉಂಟಾಗಲಿಲ್ಲ.
ವಿದ್ಯುತ್ ಕಂಬದಲ್ಲಿ ನಂಬ್ರ ಹಾಕಲಾಗಿದ್ದು ಸಮಸ್ಯೆ ಪರಿಹಾರಕ್ಕೆ ಕರೆ ಮಾಡಲು ದೂರವಾಣಿ ಸಂಖ್ಯೆಯನ್ನು ಅಧಿಕಾರಿಗಳು ನೀಡಿದ್ದಾರೆ. ಆದರೆ ಈ ನಂಬ್ರಕ್ಕೆ ಕರೆ ಮಾಡಿ ತಿಳಿಸಿದರೂ ಈಗ, ನಾಳೆ ಎಂದು ಹೇಳುತ್ತಾರೆ ಹೊರತು ದುರಸ್ತಿ ನಡೆಯುತ್ತಿಲ್ಲ. ಈ ಪರಿಸರದಲ್ಲಿ ಬೀದಿ ನಾಯಿಗಳ ಕಾಟ ಕೂಡಾ ವಿಪರೀತವಾಗಿದ್ದು, ರಾತ್ರಿ ಸಂಚಾರವು ಭೀತಿದಾಯಕವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೂಡಲೇ ಬೀದಿ ದೀಪವನ್ನು ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.







