ತಿರುವನಂತಪುರ: 2027-28ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರ್ಪಡೆಗೊಳಿಸುವ ವಯೋಮಿತಿ ಯನ್ನು ಆರು ವರ್ಷವಾಗಿ ನಿಗದಿಪಡಿ ಸಲಾಗಿದೆ. ಇದರಂತೆ ಆರು ವರ್ಷ ಪೂರ್ತಿಯಾದ ಮಕ್ಕಳಿಗೆ ಮಾತ್ರವೇ ಇನ್ನು ಒಂದನೇ ತರಗತಿಗೆ ಪ್ರವೇಶ ಲಭಿಸಲಿದೆ. ಈ ಹೊಸ ಕ್ರಮ ಜ್ಯಾರಿಗೊಳ್ಳುವ ವೇಳೆ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾ ರ್ಥಿಗಳ ಸಂಖ್ಯೆಯಲ್ಲಿ ಶೇ. ೪೫ರಷ್ಟು ಕುಸಿತ ಉಂಟಾಗುವ ಸಾಧ್ಯತೆ ಇದೆಯೆಂದು ಲೆಕ್ಕಹಾಕಲಾಗಿದೆ. ಮಾತ್ರವಲ್ಲ ಅಧ್ಯಾಪಕರ ಖಾಯಂ ನೇಮಕಾತಿಯ ಮೇಲೂ ಇದು ಪರಿಣಾಮ ಬೀರುವ ಸಾಧ್ಯತೆ ಇದೆ.
ಒಂದನೇ ತರಗತಿ ಪ್ರವೇಶಕ್ಕಿರುವ ವಯೋಮಿತಿಯನ್ನು ಆರು ವರ್ಷವಾಗಿ ನಿಗದಿಪಡಿಸಬೇಕೆಂದು ಕೇಂದ್ರ ಸರಕಾರ ವರ್ಷಗಳ ಹಿಂದೆ ಯೇ ಎಲ್ಲಾ ರಾಜ್ಯಗಳಿಗೆ ನಿರ್ದೇಶ ನೀಡಿತ್ತು. ಆದರೆ ಆ ನಿರ್ದೇಶವನ್ನು ಕೇರಳ ಸರಕಾರ ಈ ತನಕ ಜ್ಯಾರಿ ಗೊಳಿಸಿಲ್ಲ. ಈ ನಿರ್ದೇಶ ಪಾಲಿಸದೇ ಇದ್ದಲ್ಲಿ ಕೇಂದ್ರ ಸರಕಾರದಿಂದ ಲಭಿಸುವ ಸಹಾಯಗಳು ರಾಜ್ಯಕ್ಕೆ ಲಭಿಸದೆಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಇದರಿಂದಾಗಿ ಕೇಂದ್ರದ ಆ ನಿರ್ದೇಶವನ್ನು 2027ರಿಂದ ಜ್ಯಾರಿಗೊಳಿಸಲು ಕೇರಳ ಸರಕಾರ ಈಗ ಮುಂದಾಗಿದೆ. ಕೇರಳದಲ್ಲಿ ಮಕ್ಕಳನ್ನು ಒಂದನೇ ತರಗತಿಗೆ ಸೇರ್ಪಡೆಗೊಳಿಸುವ ಕನಿಷ್ಠ ವಯೋಮಿತಿ ಈಗ ಐದು ವರ್ಷವಾಗಿದೆ. 2027ರಿಂದ ಆ ಪ್ರಾಯಮಿತಿ ಆರು ವರ್ಷಕ್ಕೇರಲಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ಕೇರಳದಲ್ಲಿ ಒಂದನೇ ತರಗತಿಗೆ 2,34,476 ಮಕ್ಕಳು ಸೇರ್ಪಡೆಗೊಂಡಿದ್ದಾರೆ. ಇನ್ನು ಈ ಪ್ರಾಯಮಿತಿಯನ್ನು ಆರು ವರ್ಷವಾಗಿ ಏರಿಸಿರವುದರಿಂದಾಗಿ ರಾಜ್ಯದಲ್ಲಿ ಮುಂದಿನ ವರ್ಷ ಒಂದನೇ ತರಗತಿಗೆ ಸೇರ್ಪಡೆಗೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯಲ್ಸಿ ಸುಮಾರು ಒಂದು ಲಕ್ಷದಷ್ಟು ಕುಸಿತ ಉಂಟಾಗಬಹುದೆಂದು ಸಂಬಂಧಪಟ್ಟವರು ಲೆಕ್ಕಹಾಕಿದ್ದಾರೆ.




