ಶೋಚನೀಯ ಸ್ಥಿತಿಯಲ್ಲಿರುವ ಮೀನು ಮಾರುಕಟ್ಟೆಗೆ ಹೊಸ ನಗರಸಭಾ ಆಡಳಿತ ಸಮಿತಿಯಿಂದ ಮುಕ್ತಿ ದೊರಕುವ ನಿರೀಕ್ಷೆ

ಕಾಸರಗೋಡು: ನಗರದ ಮೀನು ಮಾರುಕಟ್ಟೆಯನ್ನು ಆಧುನಿಕ ರೀತಿಯಲ್ಲಿ ನವೀಕರಿಸುವ ಕಳೆದ ನಗರಸಭೆಯ ತೀರ್ಮಾನ ಕಾಗದಕ್ಕೆ ಸೀಮಿತಗೊಂಡಿರುವುದು ನಗರಸಭಾ ಚುನಾವಣೆಯಲ್ಲಿ ಚರ್ಚೆಯಾಗಿತ್ತು.  ಕಾಸರಗೋಡು ನಗರದ ಮಧ್ಯಭಾಗದಲ್ಲಿರುವ ಮೀನು ಮಾರುಕಟ್ಟೆಯ ಶೋಚನೀಯಾವಸ್ಥೆ ಬಗ್ಗೆ ಹಲವು ಬಾರಿ ಮೀನು ಮಾರಾಟಗಾರರು, ಸಮೀಪದ ವ್ಯಾಪಾರಿಗಳು ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ರಸ್ತೆ ಬದಿಯಲ್ಲಿಯೇ ಮೀನು ಮಾರಾಟ, ಸ್ಥಳದ ಇತಿಮಿತಿಯಿಂದಾಗಿ ಉಸಿರುಗಟ್ಟಿಸುವಂತಹ ವಾತಾವರಣ ಈಗ ಮೀನು ಮಾರುಕಟ್ಟೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ ಆಡಳಿತ ಸಮಿತಿಯ ಕಾಲದಲ್ಲಿ ಜ್ಯಾರಿಯಾಗದ ನವೀಕರಣ ಕೆಲಸಗಳಿಂದಾಗಿ ಮೀನು ಕಾರ್ಮಿಕರು ಚುನಾವಣೆಯಲ್ಲಿ ಈ ವಿಷಯವನ್ನು ಚರ್ಚೆಯಾಗುವಂತೆ ಮಾಡಿದ್ದರು. ಮೀನು ಮಾರುಕಟ್ಟೆಗೆ ತೆರಳುವ ದಾರಿಯಲ್ಲಿ, ಎಂ.ಜಿ ರಸ್ತೆ ಬದಿಯಲ್ಲಿ ಮೀನು ಮಾರಾಟ ನಡೆಯುತ್ತಿರುವುದು ಮೊದಲಾದವುಗಳಿಂದಾಗಿ ಮಾರುಕಟ್ಟೆಗೆ ಜನರ ಆಗಮನ ಕಡಿಮೆಯಾಗುತ್ತಿತ್ತು.  ಇದು ಕೆಲವೊಮ್ಮೆ ವಾಗ್ವಾದಗಳಿಗೂ ಕಾರಣವಾಗುತ್ತಿತ್ತು. ಹೆಚ್ಚಿನ ಸಮಯಗಳಲ್ಲಿ ತ್ಯಾಜ್ಯ ತುಂಬಿ ಗಲೀಜಾಗಿರುವ ಮೀನು ಮಾರುಕಟ್ಟೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಹಲವು ಬಾರಿ ಮೀನು ಮಾರಾಟಗಾರರಿಂದ ದಂಡ ವಸೂಲು ಮಾಡಿದ್ದರು.

ಮೂಲಭೂತ ಸೌಕರ್ಯ ಹೆಚ್ಚಿಸಿ ಆಧುನಿಕ ರೀತಿಯಲ್ಲಿ ಮೀನು ಮಾರುಕಟ್ಟೆಯನ್ನು ನವೀಕರಿಸಲು ಹೊಸ ನಗರಸಭಾ ಆಡಳಿತ ಸಮಿತಿ ಮುಂದೆ ಬರಬೇಕೆಂದು ಮೀನು ಕಾರ್ಮಿಕರು, ವ್ಯಾಪಾರಿಗಳು ಆಗ್ರಹಿಸಿದ್ದಾರೆ.

RELATED NEWS

You cannot copy contents of this page