ಕಾಸರಗೋಡು: ಮಂಗಳೂರಿನಿಂದ ಕಾಸರಗೋಡು ಮೂಲಕ ತಿರುವನಂತಪುರದ ತನಕ ತೃತೀಯ ರೈಲು ಹಳಿ ಯೋಜನೆ ಶೀಘ್ರ ಸಾಕಾರಗೊಳ್ಳಲಿದೆ ಎಂದು ದಕ್ಷಿಣ ರೈಲ್ವೇಯ ಹೆಚ್ಚುವರಿ ಜನರಲ್ ಮೆನೇಜರ್ ವಿಪಿನ್ ಕುಮಾರ್ ಹೇಳಿದ್ದಾರೆ.
ಇದಕ್ಕಿರುವ ಸಮಗ್ರ ಯೋಜನಾ ವರದಿ (ಡಿಪಿಆರ್)ಯನ್ನು ಈಗ ತಯಾರಿಸಲಾಗುತ್ತಿದ್ದು, ಅದು ಪೂರ್ಣಗೊಂಡ ಬಳಿಕ ಹಳಿ ನಿರ್ಮಾಣ ಕೆಲಸ ಆರಂಭಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ.
ತೃತೀಯ ರೈಲ್ವೇ ಹಳಿ ನಿರ್ಮಾಣ ಕೇರಳಕ್ಕೆ ಅತೀ ಅಗತ್ಯವಾಗಿದೆ. ಈ ಯೋಜನೆಯ ನಿರ್ಮಾಣ ಕೆಲಸ ಪೂರ್ಣಗೊಂಡಲ್ಲಿ ಕೇರಳದ ರೈಲು ಯಾತ್ರಾ ಕ್ಲೇಶಕ್ಕೆ ಗರಿಷ್ಠ ಪರಿಹಾರ ಉಂಟಾಗಲಿದೆ. ಈ ಯೋಜನೆ ಪೂರ್ಣಗೊಂಡ ನಂತರ ಮಂಗಳೂರಿನಿಂದ ಕಾಸರಗೋಡು ದಾರಿಯಾಗಿ ಶೊರ್ನೂರು ತನಕ ನಾಲ್ಕನೇ ರೈಲು ಹಳಿ ನಿರ್ಮಾಣ ಯೋಜನೆಯೂ ಆರಂಭಗೊಳ್ಳಲಿದೆ. ತೃತೀಯ ರೈಲುಹಳಿ ಯೋಜನೆ ಪೂರ್ಣಗೊಂಡಲ್ಲಿ ಮಂಗಳೂರಿನಿಂದ ಶೊರ್ನೂರು ತನಕ 130 ಕಿ.ಮೀ ವೇಗದಲ್ಲಿ ರೈಲು ಸೇವೆ ನಡೆಸಲು ಸಾಧ್ಯವಾಗಲಿದೆ. ಮುಂದಿನ ಎರಡು ವರ್ಷಗಳೊಳಗೆ ಈ ಯೋಜನೆ ಪೂರ್ಣಗೊಳ್ಳಲಿದೆ ಎಂದೂ ಅವರು ತಿಳಿಸಿದ್ದಾರೆ.






