ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಆರಿಕ್ಕಾಡಿಯಲ್ಲಿರುವ ಟೋಲ್ ಬೂತ್‌ನಲ್ಲಿ ಘರ್ಷಣೆ ಹಾಗೂ ಸಾರಿಗೆ ಅಡಚಣೆ ಸೃಷ್ಟಿಸಿದ ಆರೋಪ ದಂತೆ ಕ್ರಿಯಾಸಮಿತಿ ನೇತಾರರಾದ ಸಿಪಿಎಂ, ಲೀಗ್ ನೇತಾರರಾದ 10 ಮಂದಿ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕ್ರಿಯಾ ಸಮಿತಿ ನೇತಾರನೂ, ಸಿಪಿಎಂ ಕುಂಬಳೆ ಏರಿಯಾ ಸೆಕ್ರೆಟರಿಯಾದ ಸಿ.ಎ. ಸುಬೈರ್, ಲೀಗ್ ಪದಾಧಿಕಾರಿಗಳಾದ ಎ.ಕೆ.ಆರೀಫ್, ಅಶ್ರಫ್ ಕಾರ್ಳೆ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ 7 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಟೋಲ್ ಬೂತ್ ಮೆನೇಜರ್ ಹರ್ಯಾಣ ನಿವಾಸಿಯಾದ ಅಮಿತ್ ಕುಮಾರ್ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಈ ತಿಂಗಳ 28ರಂದು ರಾತ್ರಿ 10 ಗಂಟೆಗೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ತಂಡ ಸೇರಿ ಟೋಲ್ ಬೂತ್ ಮುಂದೆ ಸಾರಿಗೆ ಅಡಚಣೆ ಸೃಷ್ಟಿಸಿ ದೂರುಗಾರನನ್ನು ಒಂದನೇ ಆರೋಪಿಯಾದ ಸುಬೈರ್ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಅಲ್ಲದೆ ದೂರುಗಾರ ಹಾಗೂ ಟೋಲ್ ಬೂತ್‌ನ ಇತರ ನೌಕರರಿಗೆ ಬೆದರಿಕೆಯೊಡ್ಡಿ ಅವಾಚ್ಯವಾಗಿ ನಿಂದಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.







