ಆರಿಕ್ಕಾಡಿ ಟೋಲ್ ಪ್ಲಾಜಾ ಮುಚ್ಚುಗಡೆಗೆ ಜನಪರ ಹೋರಾಟ ಕಾರಣ- ಎಕೆಎಂ ಅಶ್ರಫ್

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಟೋಲ್ ಬೂತ್ ಮುಚ್ಚುಗಡೆಗೊಳಿಸಿದ್ದು ಜನಪರ ಹೋರಾಟದ ಫಲವಾಗಿ ಎಂದು ಶಾಸಕ ಎಕೆಎಂ ಅಶ್ರಫ್ ಸುದ್ಧಿಗೋಷ್ಠಿಯಲ್ಲಿ ಹಕ್ಕು ಮಂಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನು ಎಲ್ಲಾ ರೀತಿಯಲ್ಲೂ ಕಾಸರಗೋಡಿನ ಜನರು ಸ್ವಾಗತಿಸಿದ್ದರು. ಟೋಲ್ ಸಂಗ್ರಹಕ್ಕೆ ಯಾರೂ ವಿರೋಧಿಗಳಲ್ಲ. ಅನ್ಯಾಯ ರೀತಿಯಲ್ಲಿ ಟೋಲ್ ಸಂಗ್ರಹವನ್ನು ಎದುರಿಸಲಾಗಿದೆ. ಈ ಬಗ್ಗೆ ಎಲ್ಲಾ ಬಾಗಿಲುಗಳನ್ನು ಬಡಿಯಲಾಗಿದೆ. ಯಾವುದೇ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಜನಪರ ಕ್ರಿಯಾ ಸಮಿತಿ ರೂಪೀಕರಿಸಲಾಗಿದೆ. ಸಮಿತಿಯ ಪ್ರಥಮ ಸಭೆಯಲ್ಲಿ ಬಿಜೆಪಿ ಸಹಿತದ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಿನುಟ್ಸ್ ಪುಸ್ತಕ ಪರಿಶೀಲಿಸಿದರೆ ಈ ಬಗ್ಗೆ ಎಲ್ಲರಿಗೂ ತಿಳಿಯಬಹುದು. ಆದರೆ ಬಳಿಕ ಬಿಜೆಪಿ ದೂರ ನಿಂತಿದೆ ಎಂದು ಶಾಸಕರು ನುಡಿದರು.

ಟೋಲ್ ಸಂಗ್ರಹದ ವಿರುದ್ಧ ನ್ಯಾಯಾಲಯದಲ್ಲಿ ಅರ್ಜಿ ಪರಿಗಣನೆಯಲ್ಲಿರುವಾಗ ಫಾಸ್ಟ್ ಟ್ಯಾಗ್ ಉಪಯೋಗಿಸಿಕೊಂಡು ಹಣ ಸಂಗ್ರಹಗೈಯ್ಯುತ್ತಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಇದರ ವಿರುದ್ಧ ಜನಪರ ಕ್ರಿಯಾ ಸಮಿತಿ ಮುಷ್ಕರ ಆರಂಭಿಸಿತ್ತು. ಮುಷ್ಕರವನ್ನು ಪೊಲೀಸರು ಹದ್ದುಬಸ್ತಿನಲ್ಲಿಡಲು ಯತ್ನಿಸಿದರು. ಶಾಸಕ ಸಹಿತ ಇರುವವನ್ನು ಬಂಧಿಸಿ ತೆರವುಗೊಳಿಸಿದರು. ಹೈಕೋರ್ಟ್‌ನಲ್ಲಿ ಜನಪರ ಸಮಿತಿಗೆ ಅನುಕೂಲಕರವಾದ ತೀರ್ಮಾನ ಉಂಟಾಗಬಹುದೆಂಬ ಸೂಚನೆಯ ಹಿನ್ನೆಲೆಯಲ್ಲಿ ಟೋಲ್ ಬೂತ್ ಮುಚ್ಚುಗಡೆಗೊಳಿಸಲು ಕೇಂದ್ರ ಸರಕಾರ  ಮುಂದಾಗಿದೆ. ಹಲವಾರು ತ್ಯಾಗಗಳನ್ನು ಇದಕ್ಕೆ ಬೇಕಾಗಿ ಮಾಡಬೇಕಾಗಿ ಬಂತು. ೯ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಜನರ ಹಾಗೂ ನ್ಯಾಯದ ವಿಜಯವಿದು ಎಂದು ಅವರು ನುಡಿದರು. ಸಿಪಿಎಂ ಕುಂಬಳೆ ಏರಿಯಾ ಸಮಿತಿ ಕಾರ್ಯದರ್ಶಿ ಸಿ.ಎ. ಸುಬೈರ್ ಸಹಿತವಿರುವ  ಕ್ರಿಯಾ ಸಮಿತಿ ಪದಾಧಿಕಾರಿಗಳು ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದರು.

You cannot copy contents of this page