ಕಾಸರಗೋಡು: ಪ್ರಾಯಪೂರ್ತಿ ಯಾಗದ ಇಬ್ಬರು ಬಾಲಕಿಯರಿಗೆ ಮದುವೆ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿ ಗರ್ಭಿಣಿಯಾಗಿಸಿದ ಘಟನೆಗೆ ಸಂಬಂಧಿಸಿ ಪೊಲೀಸರು ಪೋಕ್ಸೋ ಪ್ರಕಾರ ಎರಡು ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ. ರಾಜಪುರಂ ಹಾಗೂ ನೀಲೇಶ್ವರ ಪೊಲೀಸ್ ಠಾಣೆಗಳಲ್ಲಿ ಈ ಕೇಸು ದಾಖಲಿಸಲಾಗಿದೆ. ರಾಜಪುರಂ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಕರ್ನಾಟಕ ನಿವಾಸಿಯಾದ ಸಿದ್ದಾರ್ಥ್ ಎಂಬಾತನನ್ನು ಕಸ್ಟಡಿಗೆ ತೆಗೆಯಲಾಗಿದೆ. ಕಿರುಕುಳ ನೀಡಿರುವುದು ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಾದುದರಿಂದ ಪ್ರಕರಣವನ್ನು ಅಲ್ಲಿಗೆ ಹಸ್ತಾಂತರಿಸಲಾಗಿದೆ.
ಕರ್ನಾಟಕ ನಿವಾಸಿಯಾದ 13ರ ಬಾಲಕಿ ಕೆಲವು ವರ್ಷಗಳಿಂದ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆ-ತಾಯಿ ಜೊತೆ ವಾಸಿಸುತ್ತಿದ್ದಾಳೆ. ಈಮಧ್ಯೆ ಸಿದ್ಧಾರ್ಥ್ ಮದುವೆ ಭರವಸೆಯೊಡ್ಡಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಇತ್ತೀಚೆಗೆ ಬಾಲಕಿಗೆ ಅಸಹನೀಯ ಹೊಟ್ಟೆ ನೋವು ಅನುಭವಗೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತಲುಪಿಸಲಾಯಿತು. ವೈದ್ಯರು ನಡೆಸಿದ ತಪಾಸಣೆಯಲ್ಲಿ ಬಾಲಕಿ ಗರ್ಭಿಣಿಯೆಂದು ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ರಾಜಪುರಂ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿಕೊಂಡಿದ್ದಾರೆ.
ಇದೇ ವೇಳೆ 17 ವರ್ಷ ಪ್ರಾಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಯಿತೆಂಬ ದೂರಿನಲ್ಲಿ ನೀಲೇಶ್ವರ ಪೊಲೀಸರು 19 ವರ್ಷ ಪ್ರಾಯದ ತೆಂಗಿನ ಮರವೇರುವ ಕಾರ್ಮಿಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ನೀಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಕರ್ನಾಟಕ ನಿವಾಸಿಯಾದ ಬಾಲಕಿಯನ್ನು ಇನ್‌ಸ್ಟಾಗ್ರಾಂ ಮೂಲಕ ಯುವಕ ಪರಿಚಯಗೊಂಡಿದ್ದನು. ಬಳಿಕ ಮದುವೆಯಾಗುವುದಾಗಿ ಭರವಸೆಯೊಡ್ಡಿ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಇತ್ತೀಚೆಗೆ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರಲ್ಲಿಗೆ ತೆರಳಲಾಗಿದೆ. ತಪಾಸಣೆಯಲ್ಲಿ ಬಾಲಕಿ ಗರ್ಭಿಣಿಯಾಗಿರುವುದಾಗಿ ತಿಳಿದುಬಂದಿದ್ದು, ಈ ವಿಷಯವನ್ನು ನೀಲೇಶ್ವರ ಪೊಲೀಸರಿಗೆ ತಿಳಿಸಲಾಗಿದೆ. ಇದರಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.







