ಕುಂಬಳೆ: ಕುಂಬಳೆ ಗ್ರಾಮ ಪಂಚಾಯತ್‌ನಲ್ಲಿ ಯುಡಿಎಫ್‌ಗೆ ಲಭಿಸಿದ ಅಭೂತಪೂರ್ವ ಗೆಲುವು ಕಳೆದ ಐದು ವರ್ಷಗಳ ಕಾಲ ಪ್ರಸ್ತುತ ಪಂಚಾಯತ್‌ನಲ್ಲಿ ನಡೆದ ಆಡಳಿತಕ್ಕೆ ಜನರು ನೀಡಿದ ಅಂಗೀ ಕಾರವಾಗಿದೆ ಎಂದು ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಯೂಸಫ್ ತಿಳಿಸಿದ್ದಾರೆ. ಕಳೆದ ಐದು ವರ್ಷ ಕಾಲದಲ್ಲಿ ಹಲವು ಯೋಜನೆಗಳನ್ನು ಪಂಚಾಯತ್‌ನ ಆಡಳಿತ ಮಂಡಳಿ ಜ್ಯಾರಿಗೊಳಿಸಿದೆ. ಇದೇ ವೇಳೆ ವಿರೋಧ ಪಕ್ಷಗಳು ಹೊರಿಸಿದ ಭ್ರಷ್ಟಾಚಾರ ಆರೋಪ ವನ್ನು ಜನರು ತಿರಸ್ಕರಿಸಿದ್ದಾರೆ ಎಂದು ಅವರು ‘ಕಾರವಲ್’ಗೆ ತಿಳಿಸಿದ್ದಾರೆ.
ಪಂಚಾಯತ್ ವ್ಯಾಪ್ತಿಯ ಹೊಯ್ಗೆ ಕಡವಿನ ಸೂಪರ್‌ವೈಸರ್ ಆಗಿದ್ದ ಯೂತ್‌ಲೀಗ್ ನೇತಾರ ಕೆಲಸ ಮಾಡದೆ ವೇತನ ಪಡೆದ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ಆತನನ್ನು ಆ ಸ್ಥಾನದಿಂದ ತೆರವುಗೊಳಿಸಿ ವೇತನವಾಗಿ ಪಡೆದುಕೊಂಡ ಹಣವನ್ನು ಮರಳಿ ಪಡೆಯಲು ಪಂಚಾಯತ್ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿತ್ತು. ಇದರ ದ್ವೇಷದಿಂದ ಈ ವ್ಯಕ್ತಿ ಸಿಪಿಎಂ, ಬಿಜೆಪಿ, ಎಸ್‌ಡಿಪಿಐ ಯೊಂದಿಗೆ ಸೇರಿ ಪಂಚಾಯತ್‌ನ ವಿರುದ್ಧ ಭ್ರಷ್ಟಾಚಾರ ಹೊರಿಸಿದ್ದಾರೆ. ಈ ಆರೋಪ ಕೇಳಿಬಂದ ಕೂಡಲೇ ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ರಾಜ್ಯ ಸ್ಥಳೀಯಾಡಳಿತ ಖಾತೆ ಸಚಿವ ಹಾಗೂ ವಿಜಿಲೆನ್ಸ್‌ಗೆ ಪಂಚಾಯತ್‌ನ ಅಧ್ಯಕ್ಷೆ ಎಂಬ ನೆಲೆಯಲ್ಲಿ ತಾನು ಮನವಿ ಸಲ್ಲಿಸಿದ್ದೇನೆ. ಆದರೆ ಮನವಿ ಸಲ್ಲಿಸಿ ಹಲವು ತಿಂಗಳಾದರೂ ಇದುವರೆಗೆ ಭ್ರಷ್ಟಾಚಾರ ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ತಾಹಿರಾ ಯೂಸಫ್ ತಿಳಿಸಿದ್ದಾರೆ.
ಪ್ರಸ್ತುತ ಪಂಚಾಯತ್‌ನಲ್ಲಿ ಒಟ್ಟು 24 ಸೀಟುಗಳ ಪೈಕಿ 15 ಸೀಟುಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಇದರಲ್ಲಿ 13 ಮುಸ್ಲಿಂ ಲೀಗ್, 2 ಕಾಂಗ್ರೆಸ್ ಒಳಗೊಂಡಿದೆ. ಓರ್ವ ಲೀಗ್‌ನ ಬಂಡುಕೋರ ಅಭ್ಯರ್ಥಿ ಕೂಡಾ ಜಯಗಳಿಸಿದ್ದಾರೆ. ಬಿಜೆಪಿ 5 ಸೀಟುಗಳನ್ನು, ಸಿಪಿಎಂ ಮೂರು ಸೀಟುಗಳನ್ನು ಗಳಿಸಿದೆ. ಕಳೆದ ಬಾರಿ 1 ಸೀಟು ಗಳಿಸಿದ್ದ ಎಸ್‌ಡಿಪಿಐಗೆ ಈ ಬಾರಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.







