ಕುಂಬಳೆ: ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿಯಲ್ಲಿ ತ್ಯಾಜ್ಯ ತಂದೆಸೆಯುವವರು ಇನ್ನು ಜಾಗ್ರತೆ ವಹಿಸದಿದ್ದರೆ ಸಮಸ್ಯೆಯಾಗಲಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯವನ್ನು ಉಪೇಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ನವೋದಯ ಫ್ರೆಂಡ್ಸ್ ಕ್ಲಬ್ ಈ ಪರಿಸರದಲ್ಲಿ ಸೋಲಾರ್ ಕ್ಯಾಮರಾ ಸ್ಥಾಪಿಸಿದೆ. ಶಾಂತಿಪಳ್ಳದಿಂದ ಭಾಸ್ಕರನಗರ ವರೆಗಿರುವ ರಸ್ತೆ ಬದಿ ಕ್ಲಬ್ ಕ್ಯಾಮರಾ ಸ್ಥಾಪಿಸಿದ್ದು, ತ್ಯಾಜ್ಯ ತಂದೆಸೆಯುವವರು ಇದರಲ್ಲಿ ಸಿಕ್ಕಿ ಬೀಳುವ ಸಾಧ್ಯತೆ ಇದೆ. ರಸ್ತೆ ಬದಿಯನ್ನು ಕ್ಲಬ್ನವರು ಇತ್ತೀಚೆಗೆ ಶುಚಿಗೊಳಿಸಿದ್ದರು. ಅಲ್ಲದೆ ಎರಡು ಬಾರಿ ತ್ಯಾಜ್ಯ ತಂದೆಸೆಯುವವರನ್ನು ಸೆರೆ ಹಿಡಿದು ದಂಡ ವಸೂಲಿ ಮಾಡಲಾಗಿತ್ತು. ಆದರೂ ತ್ಯಾಜ್ಯವನ್ನು ಇಲ್ಲಿ ಉಪೇಕ್ಷಿಸುತ್ತಿರುವುದು ಹೆಚ್ಚಿದ ಕಾರಣ ಕ್ಲಬ್ ತನ್ನ ಸ್ವಂತ ವೆಚ್ಚದಿಂದ ಇಲ್ಲಿ ಸೋಲಾರ್ ಕ್ಯಾಮರಾವನ್ನು ಸ್ಥಾಪಿಸಿದೆ. ಕೆಲವು ಕಡೆಗಳಲ್ಲಿ ರಹಸ್ಯ ಸ್ಥಳದಲ್ಲಿ ಕ್ಯಾಮರಾವಿದ್ದು, ತ್ಯಾಜ್ಯ ಉಪೇಕ್ಷಿಸುವವರು ಇದರಲ್ಲಿ ಸೆರೆಯಾಗಿ ಮತ್ತೆ ಕಾನೂನು ಕ್ರಮಕ್ಕೆ ಮುಂದಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.






