ಕೇರಳದಲ್ಲಿನ್ನು ಯಾರ ಆಡಳಿತ? ಜನರ ತೀರ್ಪು ನಾಳೆ

ಕಾಸರಗೋಡು: ಕೇರಳದಲ್ಲಿ  ಇನ್ನು ಯಾರು ಆಡಳಿತ ನಡೆಸಬೇಕು ಎಂಬು ದನ್ನು ನಾಳೆ ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸುವ ಮೂಲಕ ಜನರು ತೀರ್ಪು ನೀಡಲಿದ್ದಾರೆ.

ಮತದಾನ ನಾಳೆ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡು ಸಂಜೆ 6 ಗಂಟೆ ತನಕ ಮುಂದುವರಿಯಲಿದೆ. ರಾಜ್ಯದಲ್ಲಿ ಒಟ್ಟು 883 ಅಭ್ಯರ್ಥಿಗಳು  ಚುನಾವಣಾ ಕಣದಲ್ಲಿದ್ದಾರೆ. ಇವರ ಸೋಲು ಗೆಲುವನ್ನು ಮತದಾರರು ನಾಳೆ ನಿರ್ಣಯಿಸಲಿದ್ದಾರೆ.

ಕೇರಳದ ಒಟ್ಟು 140 ವಿಧಾನ ಸಭಾ ಕ್ಷೇತ್ರಗಳಲ್ಲಾಗಿ 30,495 ಮತಗಟ್ಟೆಗಳನ್ನು ಏರ್ಪಡಿಸಲಾಗಿದೆ. ರಾಜ್ಯದಲ್ಲಿ 18ರಿಂದ 19ರ ಮಧ್ಯೆ ಪ್ರಾಯದ 4,66,408 ಚೊಚ್ಚಲ ಮತದಾರರೂ ಸೇರಿದಂತೆ ಒಟ್ಟಾರೆಯಾಗಿ 2,71,96,936 ಮತದಾರರಿದ್ದಾರೆ. ಕೇರಳದ ಆಡಳಿತ ಯಂತ್ರವನ್ನು ಯಾರ ಕೈಗೆ ಒಪ್ಪಿಸಬೇಕು ಎಂಬುದನ್ನು ಅವರು ತೀರ್ಮಾನಿಸುವರು. ವಿಶೇಷವೆಂದರೆ ಎಲ್‌ಡಿಎಫ್, ಯುಡಿಎಫ್, ಎನ್‌ಡಿಎ ಮಧ್ಯೆ ಪ್ರಬಲ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇದರಲ್ಲಿ ಎನ್‌ಡಿಎ ಒಂದು ಪ್ರಬಲ ಶಕ್ತಿಯಾಗಿ ಹೊರ ಹೊಮ್ಮಿದಲ್ಲಿ ಕೇರಳದ ರಾಜಕೀಯಕ್ಕೆ ಹೊಸ ಆಯಾಮ ನೀಡಲಿದೆ.   ಎಡರಂಗ ಈ ಚುನಾವಣೆಯಲ್ಲಿ ಗೆದ್ದಲ್ಲಿ ಕೇರಳದಲ್ಲಿ ಸತತವಾಗಿ ಮೂರನೇ ಬಾರಿ ಅಧಿಕಾರಕ್ಕೇರಿದ ಹೊಸ  ಇತಿಹಾಸ ಸೃಷ್ಟಿಯಾಗಲಿದೆ.  ಕಳೆದ ಎರಡು ಬಾರಿಯ ಚುನಾವಣೆಯಲ್ಲಿ ಸತತ ಹಿಂಭಡ್ತಿಪಡೆದ ಯುಡಿಎಫ್‌ಗೆ ಈ ಚುನಾವಣಾ ಫಲಿತಾಂಶ ಅದರ ಮುಂದಿನ ರಾಜಕೀಯ ಸ್ಥಿರತೆಗೆ ಅತೀ ನಿರ್ಣಾಯಕವಾಗಲಿದೆ.

ರಾಜ್ಯದಲ್ಲಿ ಒಟ್ಟು ಇರುವ ಮತ ಗಟ್ಟೆಗಳ ಪೈಕಿ 2040ಮತಗಟ್ಟೆಗಳನ್ನು ಸೂಕ್ಷ್ಮ ಸಂವೇದಿ ಎಂದು ಗುರುತಿಸ ಲಾಗಿದೆ. ಇಂತಹ ಮತಗಟ್ಟೆಗಳಲ್ಲಿ ಇನ್ನಷ್ಟು ಹೆಚ್ಚಿನ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಇಲ್ಲಿ ಕೇಂದ್ರ ಪಡೆ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ   ನಿಯೋ ಜಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ 11,03,618  ಮತದಾರರಿದ್ದು ಅದರಲ್ಲಿ 5,44,543 ಪುರುಷರು, 5,59,063 ಮಹಿಳೆಯರು ಮತ್ತು 12ಮಂಗಳಮುಖಿಯರು ಒಳಗೊಂಡಿದ್ದಾರೆ.  ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳಲ್ಲಾಗಿ ಒಟ್ಟು 32 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 269 ಮತಗಟ್ಟೆಗಳನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ 57, ಮಂಜೇಶ್ವರ 36, ಉದುಮ 34, ಹೊಸದುರ್ಗ 45 ಮತ್ತು ತೃಕರಿಪುರ ವಿಧಾನಸಭಾ ಕ್ಷೇತ್ರದ 66 ಮತಗಟ್ಟೆಗಳು ಸೇರಿದಂತೆ ಒಟ್ಟು 238 ಮತಗಟ್ಟೆಗಳನ್ನು ಸೂಕ್ಷ್ಮ ಸಂವೇದಿ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ  6679 ಮಂದಿ ಈಗಾಗಲೇ   ಮನೆಗಳಲ್ಲಿ ಮತ ಚಲಾಯಿಸಿದ್ದಾರೆ. ಹೀಗೆ ಮತ ಚಲಾಯಿಸಿದವರಲ್ಲಿ ೮೫ಕ್ಕಿಂತ ಮೇಲ್ಪಟ್ಟ ಪ್ರಾಯದ 3189 ಮಂದಿ ಮತ್ತು 3490 ವಿಕಲಚೇತನರು ಒಳಗೊಂಡಿ ದ್ದಾರೆ. ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಎಂಬಂತೆ  ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ 11 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಅತೀ ಕಡಿಮೆ ಎಂಬಂತೆ ಹೊಸದುರ್ಗ ಕ್ಷೇತ್ರದಲ್ಲಿ ಕೇವಲ 4 ಮಂದಿ ಅಭ್ಯರ್ಥಿಗಳು ಮಾತ್ರವೇ ಸ್ಪರ್ಧಿಸುತ್ತಿದ್ದಾರೆ.  ಉಳಿದಂತೆ ಕಾಸರ ಗೋಡು 5, ಉದುಮ ಮತ್ತು ತೃಕರಿಪುರ ಕ್ಷೇತ್ರಗಳಲ್ಲಿ ತಲಾ 6ರಂತೆ ಉಮೇದ್ವಾರ ರಿದ್ದಾರೆ. ರಾಜ್ಯದಾದ್ಯಂತ ಅಬ್ಬರ ಪ್ರಚಾರ ನಿನ್ನೆ ಕೊನೆಗೊಂಡಿದ್ದು ಇಂದು ನಿಶ್ಯಬ್ಧ ಪ್ರಚಾರ ನಡೆಯುತ್ತಿದೆ.

You cannot copy contents of this page