ಮತದಾನಕ್ಕೆ ಇನ್ನು  ಮೂರು ದಿನಗಳು ಮಾತ್ರ ಬಾಕಿ ಅಬ್ಬರದ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ

. ಅಮಿತ್ ಷಾ, ಶಿವರಾಜ್ ಸಿಂಗ್ ಚೌಹಾಣ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಹಿತ ಪ್ರಮುಖ ನೇತಾರರಿಂದ ಇಂದು ಪ್ರಚಾರ

ತಿರುವನಂತಪುರ:  ವಿಧಾನಸಭಾ ಚುನಾವಣೆಗೆ ಇನ್ನು ಕೇವಲ ಮೂರು  ದಿನಗಳು ಮಾತ್ರವೇ ಬಾಕಿ ಉಳಿದಿದ್ದು ಅಬ್ಬರದ ಬಹಿರಂಗ ಚುನಾವಣಾ ಪ್ರಚಾರಕ್ಕೆ ನಾಳೆ ತೆರೆಬೀಳಲಿದೆ. ಇದೇ ವೇಳೆ ಎಡರಂಗ, ಐಕ್ಯರಂಗ, ಎನ್‌ಡಿಎ ಪರ ಚುನಾವಣಾ ಪ್ರಚಾರಕ್ಕಾಗಿ ಈ ಒಕ್ಕೂಟಗಳ ಹಲವು ಘನಾನುಘಟಿ ನಾಯಕರು ಇಂದು ರಾಜ್ಯಕ್ಕೆ ಆಗಮಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ನಿನ್ನೆಯೇ ಕೇರಳಕ್ಕೆ ಆಗಮಿಸಿದ್ದಾರೆ.  ಅವರ ಎನ್‌ಡಿಎ ಪರ ಚುನಾವಣಾ ಪ್ರಚಾರ ಇಂದೂ ಮುಂದುವರಿಯುತ್ತಿದೆ. ಬೇಪೂರಿನಲ್ಲಿ ನಡೆದ ಎನ್‌ಡಿಎ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿದರು. ಅದೇ ರೀತಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಪಾಲಕ್ಕಾಡ್‌ಗೆ ಆಗಮಿಸಿ ಎನ್‌ಡಿಎ ಪರ ಪ್ರಚಾರ ನಡೆಸುವರು.ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಇಂದು ಉತ್ತರ ಕೇರಳದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಯುಡಿಎಫ್ ಪರ ಪ್ರಚಾರ ನಡೆಸು ವರು.  ತೆಲಂಗಾನ ಮುಖ್ಯಮಂತ್ರಿ ರೇವಂತ್ ರೆಡ್ಡಿ ಇಂದು ಕೊಲ್ಲಂನಲ್ಲಿ ರೋಡ್ ಶೋನಲ್ಲಿ ಭಾಗವಹಿಸ ಲಿದ್ದಾರೆ.   ಪ್ರಧಾನಮಂತ್ರಿ ನರೇಂದ್ರಮೋದಿ ಈಗಾಗಲೇ ತೃಶೂರು, ತಿರುವನಂತಪುರ ಮೊದಲಾದೆಡೆಗಳಲ್ಲಿ ಎನ್‌ಡಿಎ ಪರ ಎರಡು ಬಾರಿ ಪ್ರಚಾರ ನಡೆಸಿದ್ದಾರೆ. ಅಲ್ಲದೆ  ಬಿಜೆಪಿ, ಕಾಂಗ್ರೆಸ್, ಸಿಪಿಎಂ ಸೇರಿದಂತೆ ವಿವಿಧ ಪಕ್ಷಗಳ ನೇತಾರರೂ ರಾಜ್ಯದಲ್ಲಿ  ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ಎಡರಂಗ ಸರಕಾರದ ಕಳೆದ 10 ವರ್ಷಗಳ ಅಭಿವೃದ್ಧಿ ಕುರಿತಾದ ಪ್ರೋಗ್ರೆಸ್ ರಿಪೋರ್ಟ್ ಬಿಡುಗಡೆಗೊಳಿಸಿದರು. ಕಳೆದ 10 ವರ್ಷದಲ್ಲಿ ಎಡರಂಗ ನೀಡಿದ್ದ 900 ಭರವಸೆಗಳ ಪೈಕಿ ಶೇ. 97ರಷ್ಟನ್ನು  ಜ್ಯಾರಿಗೊಳಿಸಿದೆ.  ಲೈಫ್ ವಸತಿ ನಿರ್ಮಾಣ ಯೋಜನೆಯಂತೆ 5 ಲಕ್ಷದಷ್ಟು ಮನೆಗಳನ್ನು ಪೂರ್ತಿಗೊಳಿಸಲಾಗಿದೆ. ನಾಲ್ಕೂವರೆ ಲಕ್ಷ ಭೂಹಕ್ಕುಪತ್ರಗಳನ್ನು ವಿತರಿಸಲಾಗಿದೆ. 3,12,202 ಮಂದಿಗೆ ಪಿಎಸ್‌ಸಿ ಮೂಲಕ ಉದ್ಯೋಗ ನೀಡಲಾಗಿದೆ.  ಕೇರಳವನ್ನು ಹೂಡಿಕೆ ಸೌಹಾರ್ದರಾಜ್ಯವನ್ನಾಗಿ ಪರಿವರ್ತಿ ಸಲಾಗಿದೆ. 16 ಲಕ್ಷ ಮಹಿಳೆಯರಿಗೆ ಆರ್ಥಿಕ ನೆರವು ನೀಡಲಾಗಿದೆ. ಕೇರಳದ ರಾಷ್ಟ್ರೀಯ ಹೆದ್ದಾರಿಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ.  2,66,000 ದಷ್ಟು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗಿದೆಯೆಂದು ಮುಖ್ಯಮಂತ್ರಿ ಎಡರಂಗದ  ಪ್ರೋಗ್ರೆಸ್ ರಿಪೋರ್ಟ್ ಬಿಡುಗಡೆಗೊಳಿಸಿ ತಿಳಿಸಿದರು.ಇಂದು ಅಪರಾಹ್ನ 3 ಗಂಟೆಗೆ ಪೇರಳಶ್ಶೇರಿಯಲ್ಲಿ ನಡೆಯುವ ರೋಡ್ ಶೋನಲ್ಲಿ ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ.

You cannot copy contents of this page