ನಿಲಂಬೂರ್: ಇಲ್ಲಿಗೆ ಸಮೀಪದ ಚುಂಗತ್ತರದಲ್ಲಿ 42ರ ಯುವಕ ಆತ್ಮಹತ್ಯೆಗೈಯ್ಯಲು ಕಾರಣ ನಗ್ನ ವೀಡಿಯೋ ಪ್ರಚಾರಪಡಿಸಿದ ಹಿನ್ನೆಲೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚುಂಗತ್ತರ ಪಳ್ಳಿಕುತ್ ಕುಂಡುಕುಳದಲ್ಲಿ ರತೀಶ್ (42) ಕಳೆದ ಜೂನ್ ೧೧ರಂದು ಆತ್ಮಹತ್ಯೆಗೈದಿದ್ದರು.
ಸಾಲ ಪಡೆದ ಹಣವನ್ನು ವಾಪಸು ನೀಡದಿರುವುದಕ್ಕಾಗಿ ಸಂಬಂಧಿಕೆಯಾದ ಯುವತಿ, ಪತಿ ಹಾಗೂ ಗೆಳೆಯರು ಸೇರಿ ರತೀಶ್‌ನನ್ನು ಟ್ರ್ಯಾಪ್‌ನಲ್ಲಿ ಸಿಲುಕಿಸಿದ್ದ ರೆಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಪಳ್ಳಿಕುತ್ ಇಡಪ್ಪಲಂ ಸಿಂಧು (41), ಪತಿ ಶ್ರೀರಾಜ್ (44), ಸಿಂಧುನ ಸಂಬಂಧಿಕ ಪಳ್ಳಿಕುತ್ತ್ ಕೊನ್ನಮಣ್ಣ ನಿವಾಸಿ ಪ್ರವೀಣ್ (39), ಶ್ರೀರಾಜ್‌ನ ಗೆಳೆಯನಾದ ಮಹೇಶ್ (25) ಎಂಬಿವರು ಸೆರೆಯಾದವರು. ಚುಂಗತ್ತರ ಪೂಕೋಟ್‌ಮಣ್ಣ ನಿವಾಸಿ ಸಾಬು ತಲೆಮರೆಸಿಕೊಂಡಿದ್ದಾನೆ. ದೆಹಲಿಯಲ್ಲಿ ಉದ್ಯಮಿ ಹಾಗೂ ಅಲ್ಲೇ ವಾಸಿಸುತ್ತಿರುವ ರತೀಶ್ ಸಹೋದರನ ಮನೆ ಒಕ್ಕಲಿನಲ್ಲಿ ಭಾಗವಹಿಸಲೆಂದು ಕಳೆದ ಮೇಯಲ್ಲಿ ಊರಿಗೆ ತಲುಪಿದ್ದರು.
ಸಾಲ ನೀಡಿದ ಹಣ ವಾಪಸು ನೀಡುವುದಾಗಿ ತಿಳಿಸಿದ ಸಿಂಧುಳ ಮಾತು ನಂಬಿ ರತೀಶ್ ಈಕೆಯ ಮನೆಗೆ ತಲುಪಿದ್ದರು. ಆದರೆ ಸಿಂಧು ಹಾಗೂ ಪತಿ ಮತ್ತು ಗೆಳೆಯರು ಸೇರಿ ಕೊಠಡಿಯೊಳಗೆ ಕೂಡಿಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ ರತೀಶ್‌ನನ್ನು ಹಲ್ಲೆಗೈದು ಅಸ್ವಸ್ಥಗೊಳಿಸಿದ್ದರು. ಬಳಿಕ ನಗ್ನ ವೀಡಿಯೋ ತೆಗೆದಿದ್ದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಪಡಿಸುವುದಾಗಿ ಬೆದರಿಸಿ ಹಲ್ಲೆಗೈದಿದ್ದಾರೆ. ಆದರೆ ಇದಕ್ಕೆ ರತೀಶ್ ಒಪ್ಪದ ಹಿನ್ನೆಲೆಯಲ್ಲಿ ಬಳಿಕ ವೀಡಿಯೋವನ್ನು ಪತ್ನಿಗೆ ಹಾಗೂ ಇತರ ಹಲವರಿಗೆ ಕಳುಹಿಸಿಕೊಟ್ಟಿದ್ದರು. ವೀಡಿಯೋ ಊರಿನಲ್ಲಿ ಪ್ರಚಾರವಾದ ಹಿನ್ನೆಲೆಯಲ್ಲಿ ಮನನೊಂದು ತನ್ನ ತರವಾಡು ಮನೆಯಲ್ಲಿ ರತೀಶ್ ನೇಣು ಬಿಗಿದು ಆತ್ಮಹತ್ಯೆಗೈದಿದ್ದರು. ಸ್ವಾಭಾವಿಕ ಸಾವಾಗಿ ಪೊಲೀಸರು ಇದನ್ನು ಪ್ರಥಮವಾಗಿ ದಾಖಲಿಸಿದ್ದರು. ರತೀಶ್‌ನ ತಾಯಿಯ ಸಹೋದರ ರಾಜೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತಪಟ್ಟ ರತೀಶ್ ಹಾಗೂ ಸಿಂಧು ಸಹಪಾಠಿಯಾಗಿದ್ದರು. ಇವರು ಚಿತ್ರೀಕರಿಸಿದ ವೀಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದರು.






