ಅರಣ್ಯದಲ್ಲಿ ಜೇನುತುಪ್ಪ ಸಂಗ್ರಹಿಸುವ ವೇಳೆ ಮರದಿಂದ ಬಿದ್ದು ಯುವಕ ಸಾವು

ಕಾಸರಗೋಡು: ಜೇನುತುಪ್ಪ ಸಂಗ್ರಹಿಸಲು ಬೃಹತ್ ಮರಕ್ಕೇರಿದ  ಯುವಕ  ಕೆಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.

ವೆಳ್ಳರಿಕುಂಡ್  ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕೊನ್ನಕ್ಕಾಡ್ ಕೋಟಚ್ಚೇರಿ ಉನ್ನತಿಯಲ್ಲಿ ವಾಸಿಸುತ್ತಿರುವ ಮೂಲತಃ ಕೊಡಗು ಜಿಲ್ಲೆಯ ತನ್ನಿಮಾಣಿ ಗ್ರಾಮದ ತಲಕಾವೇರಿ  ಕೆನ್‌ಮೇಸ್ತ್ರಿ ಮೊಟ್ಟ ನಿವಾಸಿ ಎಚ್.ಪಿ ಪ್ರಕಾಶ್ (33) ಸಾವನ್ನಪ್ಪಿದ ದುರ್ದೈವಿ. ಇವರು ದಟ್ಟಾರಣ್ಯದಲ್ಲಿ ಜೇನುತುಪ್ಪ ಸಂಗ್ರಹಿಸುವ ತಂಡದ ಸದಸ್ಯರಾ ಗಿದ್ದಾರೆ. ಆಹಾರ ಸಾಮಗ್ರಿಗಳೊಂದಿಗೆ ದಟ್ಟಾರಣ್ಯಗಳಿಗೆ ಸಾಗಿ ಅಲ್ಲೇ  ಟೆಂಟ್ ನಿರ್ಮಿಸಿ ದಿನಗಳ ತನಕ ಅಲ್ಲೇ ಉಳದು ಜೇನುತುಪ್ಪ ಸಂಗ್ರಹಿಸುವುದು ಈ ತಂಡದ ಪ್ರಧಾನ ಉಪಜೀವನ ಮಾರ್ಗವಾಗಿದೆ. ಪ್ರಕಾಶ್ ಸೇರಿದಂತೆ ಮೂವರ ತಂಡ ಕಳೆದ ಶನಿವಾರ ರಾತ್ರಿ ಕೊನ್ನಕ್ಕಾಡಿಗೆ ಸಮೀಪದ ಕರ್ನಾಟಕ ರಾಜ್ಯಕ್ಕೆ ಸೇರಿದ ದಟ್ಟಾರಣ್ಯಕ್ಕೆ ಜೇನುತುಪ್ಪ ಸಂಗ್ರಹಿಸಲು ಹೋಗಿ ಅಲ್ಲೇ ಟೆಂಟ್ ನಿರ್ಮಿಸಿ ಮರಗಳಿಂದ ಜೇನುತುಪ್ಪ ಸಂಗ್ರಹದಲ್ಲಿ ತೊಡಗಿದ್ದರು. ಈಮಧ್ಯೆ ರಾತ್ರಿ ಅಲ್ಲಿನ  ಬೃಹತ್  ಮರವೊಂದರಲ್ಲಿ ಜೇನು ಗೂಡನ್ನು ಕಂಡ ಇವರು ಅದಕ್ಕೆ ಮೂರು ಏಣಿಗಳನ್ನು ಕಟ್ಟಿ ಪ್ರಕಾಶ ಮತ್ತು ಜತೆಗಿದ್ದ ಇನ್ನೋರ್ವ ಮರಕ್ಕೆ ಹತ್ತಿದ್ದರು. ಆ ವೇಳೆ ಪ್ರಕಾಶ್ ನಿಯಂತ್ರಣ ತಪ್ಪಿ ಮರದಿಂದ ಕೆಳಕ್ಕೆ ಬಿದ್ದಿದ್ದರು. ಅದನ್ನು ಕಂಡ ಜತೆಗಿದ್ದ ಇತರ ಇಬ್ಬರು ಪ್ರಕಾಶ್‌ರನ್ನು ತಕ್ಷಣ  ತಮ್ಮ ಹೆಗಲಿಗೇರಿಸಿ ಐದುಕಿಲೋ ಮೀಟರ್ ತನಕ ಸಾಗಿಸಿದ ಬಳಿಕ  ಫೋನ್ ಮೂಲಕ ಅರಣ್ಯ ರೇಂಜ್ ಕಚೇರಿಗೆ ವಿಷಯ ತಿಳಿಸಿದ್ದಾರೆ. ಅದನ್ನು ತಿಳಿದ ಅರಣ್ಯಪಾಲಕರು ಸ್ಥಳಕ್ಕಾಗಮಿಸು ವಷ್ಟರಲ್ಲಿ  ಪ್ರಕಾಶ್‌ರ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೃತದೇಹವನ್ನು ನಂತರ ಕಣ್ಣೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ನಿನ್ನೆ ಮರಣೋತ್ತರ ಪರೀಕ್ಷೆಗೊಳಪಡಿಸಿ ಬಳಿಕ ಕೋಟಚ್ಚೇರಿಯ ಮನೆ ಹಿತ್ತಿಲಲ್ಲಿ ಸಂಸ್ಕರಿಸಲಾಯಿತು.

ದಿ| ಪುಟ್ಟ-ಲಲಿತ ದಂಪತಿ ಪುತ್ರನಾಗಿರುವ ಪ್ರಕಾಶ್ ಪತ್ನಿ ರಮ್ಯ, ಮಕ್ಕಳಾದ ಶಿವಣ್ಯ, ಶಿವ, ಸಹೋದರ-ಸಹೋದರಿಯರಾದ  ಪ್ರವೀಣ್,ಸವಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page