ಕಾಸರಗೋಡು: ಕಳವುಗೈದ ಸ್ಕೂಟರ್ನಲ್ಲಿ ಸುತ್ತಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ನಾಯಮ್ಮಾರ ಮೂಲೆಯ ಕ್ವಾರ್ಟ ರ್ಸ್ನಲ್ಲಿ ವಾಸಿಸುವ ಕೋಟ್ಟಯಂ ಕಾಂಞಿರಪ್ಪಳ್ಳಿ ಪುನ್ನತ್ತಾನದ ಇಸಾಮಾಮುಲ್ಹಕ್ (29) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಕಣ್ಣೂರು ಸಿಟಿ ಪೊಲೀಸ್ನ ಎಸ್ಐ ಬಿ. ಜಿಷ್ಣು ನೇತೃತ್ವದ ಪೊಲೀಸರು ಪಾರಕಂಡಿಯಲ್ಲಿ ವಾಹನ ತಪಾಸಣೆ ನಡೆಸಿತ್ತಿದ್ದ ವೇಳೆ ಕಳವು ಆರೋಪಿ ಸಿಕ್ಕಿಬಿದ್ದಿದ್ದಾನೆ. ವಾಹನದ ದಾಖಲೆಗಳನ್ನು ಪೊಲೀಸರು ಕೇಳಿದಾಗ ಯುವಕ ತದ್ವಿರುದ್ಧ ಹೇಳಿಕೆ ನೀಡಿದ್ದಾನೆ. ಇದರಿಂದ ಈ-ಫೋಸ್ ಮೆಶಿನ್ ಉಪಯೋಗಿಸಿ ವಾಹನದ ಮಾಹಿತಿ ಗಳನ್ನು ಸಂಗ್ರಹಿಸಿದಾಗ ಸ್ಕೂಟರ್ ಎಡಕ್ಕಾಡ್ ಕುಂಞಿವಳಪ್ಪ್ನ ಎಂ.ಪಿ.ಶೀನ ಎಂಬವರದ್ದೆಂದು ತಿಳಿದುಬಂತು. ಕೂಡಲೇ ಪೊಲೀಸರು ಸ್ಕೂಟರ್ ಮಾಲಕನಿಗೆ ಕರೆ ಮಾಡಿದ್ದು, ಈ ವೇಳೆ ತನ್ನ ಸ್ಕೂಟರ್ ಮಾರ್ಚ್ 27ರಂದು ತಾವಕ್ಕರ ಹೊಸ ಬಸ್ ನಿಲ್ದಾಣದಿಂದ ಕಳವಿಗೀಡಾಗಿರುವುದಾಗಿ ಶೀನ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.






