ಯುವತಿಗೆ ಕೇಬಲ್ ವಯರ್ ಉಪಯೋಗಿಸಿ ಹಲ್ಲೆ: ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆರೆ

ಕೊಚ್ಚಿ: ಯುವತಿಯನ್ನು ಕ್ರೂರವಾಗಿ ಹಲ್ಲೆಗೈದ ಪ್ರಕರಣದಲ್ಲಿ ಯುವಮೋರ್ಚಾ ಎರ್ನಾಕುಳಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪು ಪರಮಶಿವಂ ಸೆರೆಯಾಗಿದ್ದಾನೆ. ಕೊಲೆಯತ್ನಕ್ಕೆ ಕೇಸು ದಾಖಲಿಸಲಾಗಿದೆ. ಮೊಬೈಲ್ ಚಾರ್ಜರ್ ಕೇಬಲ್ ಉಪಯೋಗಿಸಿ ಈತ ಯುವತಿಗೆ ಹಲ್ಲೆಗೈದಿದ್ದಾನೆ. ದೇಹದಲ್ಲಿ ಸಂಪೂರ್ಣ ಹಲ್ಲೆಯ ಗಾಯಗಳೊಂದಿಗೆ ಯುವತಿ ಮರಡ್ ಪೊಲೀಸ್ ಠಾಣೆಗೆ ನೇರವಾಗಿ ಹಾಜರಾಗಿ ಮಾಹಿತಿ ನೀಡಿದ್ದಾಳೆ. ಈಕೆಯ ಹೇಳಿಕೆಯನ್ನು ಪೊಲೀಸರು  ದಾಖಲಿಸಿದ್ದಾರೆ. ಕಳೆದ 5 ವರ್ಷದಿಂದ ಯುವತಿ ಹಾಗೂ ಗೋಪು ಪರಮಶಿವ ಜೊತೆಯಾಗಿ ವಾಸಿಸುತ್ತಿದ್ದರು. ಈ ಸಂದರ್ಭದಲ್ಲಿ ಈತ ಯುವತಿಗೆ ನಿರಂತರವಾಗಿ ದೈಹಿಕ ದೌರ್ಜನ್ಯಗೈಯ್ಯುತ್ತಿದ್ದನೆಂದು ದೂರಲಾಗಿದೆ. ಇದನ್ನು ಸಹಿಸಲಾಗದೆ ಇತ್ತೀಚೆಗೆ ಈಕೆ ಮನೆ ಬಿಟ್ಟು ತೆರಳಿದ್ದರು.  ಬಳಿಕ ಗೋಪು ಪರಮಶಿವಂ ಯುವತಿ ನಾಪತ್ತೆಯಾಗಿರುವುದಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಇದರ ಆಧಾರದಲ್ಲಿ ಪೊಲೀಸರು ಯುವತಿಯನ್ನು ಸಂಪರ್ಕಿಸಿ ಠಾಣೆಗೆ ಹಾಜರಾಗಲು ಆಗ್ರಹಿಸಿದ್ದರು. ಇದರಂತೆ ಠಾಣೆಗೆ ತಲುಪಿದ ಯುವತಿ ಪೊಲೀಸರಲ್ಲಿ ಹಲ್ಲೆ ಬಗ್ಗೆ ಮಾಹಿತಿ ನೀಡಿದ್ದಾರೆ.

You cannot copy contents of this page