ಕುಂಬಳೆ: ಕಳೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್‌ನಲ್ಲಿ 18364 ಮತಗಳನ್ನು ಪಡೆದು ಮುಸ್ಲಿಂಲೀಗ್‌ನ ಜಮೀಲ ಸಿದ್ಧಿಕ್ ಜಯ ಗಳಿಸಿದ್ದು, ಆದರೆ ಈ ಬಾರಿ ಕುಂಬಳೆ ಡಿವಿಶನ್‌ನಲ್ಲಿ ತೀವ್ರ ಸ್ಪರ್ಧೆ ಕಂಡುಬರುತ್ತಿದೆ. ಬಿಜೆಪಿಯ ಸ್ನೇಹಲತಾ ದಿವಾಕರ್ ಕಳೆದ ಚುನಾ ವಣೆಯಲ್ಲಿ 10840, ಎಲ್‌ಡಿಎಫ್‌ನ ಶಾಲಿನಿ 10599 ಮತಗಳನ್ನು ಪಡೆದಿದ್ದರು. ಈ ಬಾರಿ ಡಿವಿಶನ್‌ನ ಜನಸಂಖ್ಯೆ 65,349 ಇದ್ದು, ಇವರಲ್ಲಿ ಯಾರಿಗೆ ಎಷ್ಟು ಮತ ಲಭಿಸಬಹು ದೆಂಬ ಲೆಕ್ಕಾಚಾರ ಆರಂಭಗೊಂಡಿದೆ.
ಜಿಲ್ಲಾ ಪಂಚಾಯತ್‌ನ ಅಧ್ಯಕ್ಷರಾಗಿದ್ದ ಎ.ಜಿ.ಸಿ. ಬಷೀರ್, ಮಾಜಿ ಶಾಸಕ ಎಂ.ಸಿ. ಕಮರುದ್ದೀನ್ ಮೊದಲಾದ ಮುಖಂಡರು ಜಿಲ್ಲಾ ಪಂಚಾಯತ್‌ಗೆ ಆಯ್ಕೆಯಾದ ಕುಂಬಳೆ ಡಿವಿಶನ್‌ನಲ್ಲಿ ಈ ಬಾರಿ ಐಕ್ಯರಂಗದಿಂದ ಸ್ಪರ್ಧಿಸುತ್ತಿರುವುದು ಮುಸ್ಲಿಂ ಯೂತ್‌ಲೀಗ್‌ನ ಜಿಲ್ಲಾಧ್ಯಕ್ಷ, ಮುಸ್ಲಿಂ ಲೀಗ್ ಜಿಲ್ಲಾ ಸಮಿತಿ ಸದಸ್ಯ ಅಸೀಸ್ ಕಳತ್ತೂರು (43) ಆಗಿದ್ದಾರೆ. ಬಿಜೆಪಿಯಿಂದ ಕುಂಬಳೆ ಮಂಡಲ ಅಧ್ಯಕ್ಷ ಅನಂತಪುರ ನಿವಾಸಿ ಸುನಿಲ್ ಅನಂತಪುರ (44), ಸಿಪಿಎಂ ಕುಂಬಳೆ ಲೋಕಲ್ ಕಾರ್ಯದರ್ಶಿ ಮುಳಿಯಡ್ಕ ಜಮಾಯತ್ ಸಮಿತಿ ಉಪಾಧ್ಯಕ್ಷರಾಗಿರುವ ಕೆ.ಬಿ. ಯೂಸಫ್ (58) ಸ್ಪರ್ಧಾ ಕಣದಲ್ಲಿದ್ದಾರೆ. ನಿರ್ಮಾಣ ಪೂರ್ತಿಗೊಂಡ ಹೆದ್ದಾರಿಯ ಅರಿಕ್ಕಾಡಿಯಲ್ಲಿ ಟೋಲ್ ಪ್ಲಾಜಾ ಈ ಡಿವಿಶನ್‌ನಲ್ಲಿದೆ. ಟೋಲ್ ಗೇಟ್ ವಿರುದ್ಧ ಕ್ರಿಯಾ ಸಮಿತಿ ಹೈಕೋರ್ಟ್‌ನಲ್ಲಿ ನೀಡಿದ ಅರ್ಜಿಯಲ್ಲಿ ಅಂತಿಮ ತೀರ್ಮಾನ ಇದುವರೆಗೆ ಉಂಟಾಗಿಲ್ಲ. ಅಭ್ಯರ್ಥಿಗಳಲ್ಲಿ ಈ ಬಗ್ಗೆ ಮತ ದಾರರು ಪ್ರಶ್ನಿಸಿದಾಗ ನ್ಯಾಯಾಲಯದಲ್ಲಿರುವ ವಿಷಯವಾದ ಕಾರಣ ಅಂತಿಮ ತೀರ್ಮಾನ ಬರುವವರೆಗೆ ಕಾಯೋಣ ಎಂದು ಹೇಳಿ ಜಾರಿಕೊಳ್ಳುತ್ತಿರುವುದಾಗಿ ಹೇಳಲಾಗುತ್ತಿದೆ.
ಕುಂಬಳೆ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳು, ಮಂಗಲ್ಪಾಡಿ ಪಂಚಾಯತ್‌ನ 9, ಮೊಗ್ರಾಲ್‌ಪುತ್ತೂರು ಪಂಚಾಯತ್‌ನ 2 ವಾರ್ಡ್‌ಗಳು ಸೇರಿದುದಾಗಿದೆ ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್. ಕಾಸರಗೋಡು ಬ್ಲೋಕ್‌ನ ಡಿವಿಶನ್‌ಗಳಾದ ಕುಂಬಳೆ ರೈಲ್ವೇ ಸ್ಟೇಶನ್, ಮೊಗ್ರಾಲ್, ಅರಿಕ್ಕಾಡಿ, ಮಂಜೇಶ್ವರ ಬ್ಲೋಕ್‌ನ ಬಂದ್ಯೋಡು ಈ ಡಿವಿಶನ್‌ನಲ್ಲಿದೆ. ವಾರ್ಡ್ ವಿಭಜನೆಯ ಬಳಿಕ ಈ ಡಿವಿಶನ್‌ನ ಕೆಲವು ಭಾಗಗಳನ್ನು ಹೊರತುಪಡಿಸಿ ಮತ್ತೆ, ಕೆಲವನ್ನು ಸೇರಿಸಿದ ಹಿನ್ನೆಲೆಯಲ್ಲಿ ಈ ಹಿಂದಿಗಿಂತ ಈಗ ಈ ಡಿವಿಶನ್ ಭಿನ್ನವಾಗಿದೆ. ಈ ಮೊದಲು ಮುಸ್ಲಿಂಲೀಗ್‌ನ ನೇತೃತ್ವದಲ್ಲಿ ಯುಡಿಎಫ್ ಆಡಳಿತದಲ್ಲಿದ್ದ ಕುಂಬಳೆ ಪಂಚಾಯತ್‌ನ ಎಲ್ಲಾ ವಾರ್ಡ್‌ಗಳ ಹೊರತಾಗಿ ಮೊಗ್ರಾಲ್‌ಪುತ್ತೂರು ಪಂಚಾಯತ್‌ನ 11 ವಾರ್ಡ್‌ಗಳು ಒಳಗೊಂಡಿತ್ತು. ಆದರೆ ಮೊಗ್ರಾಲ್‌ಪುತ್ತೂರು ಪಂಚಾಯತ್‌ನ 11 ವಾರ್ಡ್‌ಗಳಲ್ಲಿ ೯ನ್ನು ಸಿವಿಲ್ ಸ್ಟೇಶನ್ ಡಿವಿಶನ್‌ಗೆ ಬದಲಿಸಿ ಮಂಗಲ್ಪಾಡಿ ಪಂಚಾಯತ್‌ನ 9 ವಾರ್ಡ್‌ಗಳನ್ನು ಹೊಸತಾಗಿ ಕುಂಬಳೆ ಡಿವಿಶನ್‌ಗೆ ಸೇರಿಸಲಾಗಿದೆ. ಈಗ 35 ವಾರ್ಡ್‌ಗಳು ಈ ಡಿವಿಶನ್‌ನಲ್ಲಿದ್ದು, ಇದರಲ್ಲಿ 21ರಲ್ಲಿ ಐಕ್ಯರಂಗ, 10ರಲ್ಲಿ ಬಿಜೆಪಿ, ೩ರಲ್ಲಿ ಎಡರಂಗ ಮತ್ತು ೧ರಲ್ಲಿ ಎಸ್‌ಡಿಪಿಐ ಜಯ ಗಳಿಸಿದೆ.







