ಅನಧಿಕೃತ ಹೊಯ್ಗೆ ಸಾಗಾಟ ಎರಡು ಲಾರಿಗಳ ವಶ; ಚಾಲಕ ಸೆರೆ
ಕುಂಬಳೆ: ಶಿರಿಯ ಹೊಳೆಯ ವಳಯಂನಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹ, ಸಾಗಾಟ ತಡೆಗೆ ಪೊಲೀಸರು ಕೈಗೊಳ್ಳುವ ಎಲ್ಲಾ ಕ್ರಮಗಳೂ ವಿಫಲಗೊಳ್ಳುತ್ತಿ ರುವುದಾಗಿ ದೂರಲಾಗಿದೆ.
ಇಂದು ಮುಂಜಾನೆ ಹೊಳೆಯಿಂದ ಸಂಗ್ರಹಿಸಿದ ಹೊಯ್ಗೆ ಸಾಗಿಸುತ್ತಿದ್ದ ಎರಡು ಟಿಪ್ಪರ್ ಲಾರಿಗಳನ್ನು ಕುಂಬಳೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಒಂದು ಲಾರಿಯ ಚಾಲಕನಾದ ಮಂಗಲ್ಪಾಡಿಯ ಮೊಹಮ್ಮದ್ ಸಮೀರ್ (41) ಎಂಬಾತನನ್ನು ಸೆರೆಹಿಡಿಯಲಾಗಿದೆ. ಇನ್ನೊಂದು ಲಾರಿಯ ಚಾಲಕ ಓಡಿ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗಷ್ಟೇ ವಳಯಂನಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಕಡವುಗಳನ್ನು ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ.
ಇಂದು ಮುಂಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಜೊತೆಗೆ ಎಸ್‌ಐ ಕೆ. ಶ್ರೀಜೇಶ್, ಕೋಸ್ಟಲ್ ಎಸ್‌ಐ ದಿಲೀಶ್, ಪೊಲೀಸರಾದ ವಿನೋದ್, ಚಂದ್ರನ್, ಕೃಷ್ಣಪ್ರಸಾದ್ ಮೊದಲಾದವರು ಭಾಗವಹಿಸಿದ್ದರು.