ಆಸ್ಪತ್ರೆಯಲ್ಲಿ ಯುವಕನ ದಾಂಧಲೆ ತಡೆಯಲು ತಲುಪಿದ ಎಸ್‌ಐಗೆ ಹಲ್ಲೆ, ಕಚ್ಚಿ ಗಾಯ

ಬಂದಡ್ಕ: ಅಪಘಾತದಲ್ಲಿ ಗಾಯಗೊಂಡ ಸಹೋದರನನ್ನು ಕಾಣಲು ತಲುಪಿ ಯುವಕ ಖಾಸಗಿ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದು, ವಿಷಯ ತಿಳಿದು ಅಲ್ಲಿಗೆ ಆಗಮಿಸಿದ ಎಸ್‌ಐ ಹಾಗೂ ಪೊಲೀಸರಿಗೆ ಯುವಕ ಹಲ್ಲೆಗೈದು, ಕಚ್ಚಿ ಗಾಯಗೊಳಿಸಿರುವುದಾಗಿ ದೂರಲಾಗಿದೆ. ಬೇಡಗಂ ಎಸ್‌ಐ ಎಂ. ಗಂಗಾಧರನ್‌ರ ದೂರಿನಂತೆ ವಿಕಲಚೇತನ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆಗೈದು ಕರ್ತವ್ಯಕ್ಕೆ ಅಡ್ಡಿಯುಂಟುಮಾಡಿದ ಆರೋಪದಂತೆ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಕಳ್ಳಾರು ಚಾಮುಂಡಿಕುನ್ನು, ಗಾಂಧಿನಗರ, ಶಾಸ್ತಮಂಗಲ ಹೌಸ್‌ನ ಪ್ರಮೋದ್ (೩೯) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಈ ಘಟನೆ ನಡೆದಿದೆ. ಪ್ರಮೋದ್‌ರ ಸಹೋದರ  ನಿನ್ನೆ ಅಡೂರಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದರು. ಇವರನ್ನು ಬಂದಡ್ಕದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ವಿಷಯ ತಿಳಿದು  ಪ್ರಮೋದ್ ಆಸ್ಪತ್ರೆಗೆ ತಲುಪಿದ್ದಾನೆ. ಬಳಿಕ ಆಸ್ಪತ್ರೆ ನೌಕರರೊಂದಿಗೆ ಹಾಗೂ ದಾದಿಯರೊಂದಿಗೆ ವಾಗ್ವಾದ ನಡೆಸಿದ ಈತ ಅಸಭ್ಯವಾಗಿ ನಿಂದಿಸಿರುವುದಾಗಿಯೂ ದೂರಲಾಗಿದೆ. ವಿಷಯ ತಿಳಿದು ಎಸ್‌ಐ ಗಂಗಾಧರನ್, ಚಾಲಕ ಜಯಪ್ರಕಾಶ್, ಎಎಸ್‌ಐ ಪರಮೇಶ್ವರನ್ ಎಂಬಿವರು ಸ್ಥಳಕ್ಕೆ ತಲುಪಿ ಪ್ರಮೋದ್‌ನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೆ ಪ್ರಮೋದ್ ಪೊಲೀಸರ ವಿರುದ್ಧ ಹಲ್ಲೆಗೆ ಮುಂದಾಗಿದ್ದು, ಅಲ್ಲದೆ ಕಚ್ಚಿ ಗಾಯಗೊಳಿಸಿರುವುದಾಗಿಯೂ ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ತಲುಪಿ ಪ್ರಮೋದ್‌ನನ್ನು ಕಸ್ಟಡಿಗೆ ತೆಗೆದ ಬಳಿಕ ಬೇಡಡ್ಕ ತಾಲೂಕು ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು. ವಿಕಲಚೇತನನೆಂಬ ಪರಿಗಣನೆ ನೀಡಿ ಪ್ರಮೋದ್‌ನನ್ನು ತಾಯಿಯ ಜೊತೆ ಕಳುಹಿಸಿಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಎಸ್‌ಐ ಹಾಗೂ ಚಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

You cannot copy contents of this page