ಉಪ್ಪಳದಲ್ಲಿ ತೀವ್ರಗೊಂಡ ಸಾರಿಗೆ ತಡೆ: ಶಾಸಕರಿಂದ ಜನಪ್ರತಿನಿಧಿ, ಅಧಿಕಾರಿಗಳ ಸಭೆ ಇಂದು
ಉಪ್ಪಳ: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಂಗವಾಗಿ ಉಪ್ಪಳದ ಫ್ಲೈಓವರ್ ನಿರ್ಮಾಣದಿಂದಾಗಿ ಪೇಟೆಯಲ್ಲಿ ಗಂಟೆಗಳ ಕಾಲ ಸಾರಿಗೆ ತಡೆ ಉಂಟಾಗುವುದಕ್ಕೆ ಪರಿಹಾರ ಕಾಣಲು ಶಾಸಕ ಎಕೆಎಂ ಅಶ್ರಫ್ ತ್ರಿಸ್ತರ ಪಂಚಾಯತ್ ಜನಪ್ರತಿನಿ ಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಊರಾಳುಂಗಾಲ್ ಸೊಸೈಟಿ ಪ್ರತಿನಿಧಿಗಳು, ಪೊಲೀಸ್, ಆರ್ಟಿಒ, ವ್ಯಾಪಾರಿ ಪ್ರತಿನಿಧಿಗಳು ಮೊದಲಾದವರನ್ನು ಸೇರಿಸಿಕೊಂಡು ಇಂದು ಅಪರಾಹ್ನ ೨ ಗಂಟೆಗೆ ಉಪ್ಪಳ ವ್ಯಾಪಾರ ಭವನದಲ್ಲಿ ಸಭೆಗೆ ಆಹ್ವಾನ ನೀಡಿದ್ದಾರೆ. ಆಸ್ಪತ್ರೆಗೆ, ವಿಮಾನ ನಿಲ್ದಾಣಗಳಿಗೆ, ಶಿಕ್ಷಣ, ಉದ್ಯೋಗ ಸಂಸ್ಥೆಗಳಿಗೆ ತೆರಳಬೇಕಾದವರು ಸರಿಯಾದ ಸಮಯಕ್ಕೆ ತಲುಪಲಾಗದೆ ಸಂಕಷ್ಟ ಪಡುತ್ತಿದ್ದಾರೆ. ಉಪ್ಪಳದ ಟ್ರಾಫಿಕ್ ಬ್ಲೋಕ್ನಿಂದಾಗಿ ಹಲವರಿಗೆ ವಿದೇಶಕ್ಕಿರುವ ವಿಮಾನ ಕೂಡಾ ಕೈತಪ್ಪಿರುವುದು ಕಂಡು ಬಂದಿದೆ. ಉಪ್ಪಳದ ವ್ಯಾಪಾರಿಗಳಿಗೆ ವ್ಯಾಪಾರ ನಷ್ಟದಿಂದಾಗಿ ಆರ್ಥಿಕ ಹೊಡೆತ, ಕಾಲ್ನಡೆ ಪ್ರಯಾಣಿಕರಿಗೆ ಕೂಡಾ ಸಂಚರಿಸಲು ಸಾಧ್ಯವಾಗದ ಅವಸ್ಥೆ, ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿತು ಎಂಬುದಕ್ಕೆ ಪೊಲೀಸರಿಂದ ದಂಡ, ಬಸ್ಗಳಿಗೆ ಸಮಯ ನಿಷ್ಠೆ ಪಾಲಿಸಲಾಗದಿರುವುದು, ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಖಾಸಗಿ ವಾಹನಗಳಿಗೆ ಪಾರ್ಕ್ ಮಾಡಲು ಸ್ಥಳವಿಲ್ಲದಿರುವುದು ಮೊದಲಾದ ಸಮಸ್ಯೆಗಳಿಂದ ಉಪ್ಪಳ ಪೇಟೆ ಕಂಗೆಟ್ಟು ಹೋಗಿದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಮೊದಲು ಈ ಬಗ್ಗೆ ಹಲವು ಬಾರಿ ಸಂಬಂಧ ಪಟ್ಟವರಲ್ಲಿ ತಿಳಿಸಿದ್ದರೂ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಸಭೆ ಕರೆದಿರು ವುದಾಗಿ ಶಾಸಕರು ತಿಳಿಸಿದ್ದು, ಇದೇ ವಿಷಯದಲ್ಲಿ ಈ ತಿಂಗಳ ೨೭ರಂದು ಜಿಲ್ಲಾಧಿಕಾರಿ ಕಚೇರಿಯಲ್ಲೂ ಸಭೆ ನಡೆಸಲಾಗು ವುದೆಂದು ಶಾಸಕರು ತಿಳಿಸಿದ್ದಾರೆ.