ಎಂಡಿಎಂಎ ಕೈವಶ ವಿರಿಸಿದ ಪ್ರಕರಣದ ಆರೋಪಿಗೆ ಹತ್ತು ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಮಾರಕ ಮಾದಕ ದ್ರವ್ಯವಾದ ಎಂಡಿಎಂಎ ಕೈವಶವಿರಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯಾ ಅವರು ಹತ್ತು ವರ್ಷ ಕಠಿಣ ಸಜೆ ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.

ಕಾಸರಗೋಡು ಎರಿಯಾಲ್ ಚೇರಂಗೈ ನಿವಾಸಿ ಮುಹಮ್ಮದ್  ಮರ್ಶೂಖ್ (30) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸ ದಿದ್ದಲ್ಲಿ ಆರೋಪಿ  ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

೨೦೨೨ ಡಿಸೆಂಬರ್ ೨೬ರಂದು ಮಧ್ಯಾಹ್ನ ಅಂದು ಕಾಸರಗೋಡು ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಎಂ.ವಿ. ವಿಷ್ಣು ಪ್ರಸಾದ್‌ರ ನೇತೃತ್ವದ ಪೊಲೀಸರ ತಂಡ ಕಾಸರಗೋಡು ರೈಲು ನಿಲ್ದಾಣ ಪರಿಸರದ ಪೊಯಕ್ಕರೆ ಅಬ್ದುಲ್ ರಹಿಮಾನ್ ಹಾಜಿ ಸ್ಮಾರಕ ಪಾರ್ಕ್‌ನಲ್ಲಿಗೆ ದಾಳಿ ನಡೆಸಿದಾಗ ಅಲ್ಲಿ ಆರೋಪಿ ಮುಹಮ್ಮದ್ ಮರ್ಶೂಖ್ ಗಾಂಜಾ ಸಿಗರೇಟ್ ಸೇವಿಸುತ್ತಿರುವುದನ್ನು ಕಂಡು ಆತನನ್ನು ಬಂಧಿಸಿದ್ದಾರೆ. ಬಳಿಕ ಪೊಲೀಸರು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ಆತನ ಕೈಯಲ್ಲಿ ಮಾರಾಟಕ್ಕಾಗಿ ಬಚ್ಚಿಡಲಾಗಿದ್ದ 48 ಗ್ರಾಂ ಎಂಡಿಎಂಎ ಪತ್ತೆಹಚ್ಚಲಾಗಿತ್ತು. ಈ ಪ್ರಕರಣದ ಮುಂದಿನ ತನಿಖೆಯನ್ನು ಅಂದು ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ಪಿ. ಅಜಿತ್ ಕುಮಾರ್ ನಡೆಸಿ ಬಳಿಕ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಜಿ. ಚಂದ್ರಮೋಹನ್ ಮತ್ತು ಚಿತ್ರಕಲಾ ನ್ಯಾಯಾಲಯದಲ್ಲಿ ವಾದಿಸಿದ್ದಾರೆ.

You cannot copy contents of this page