ಎರಡು ವರ್ಷಗಳ ಹಿಂದೆ 35 ಕೋಟಿ ರೂ. ವ್ಯಯಿಸಿ ನಿರ್ಮಿಸಿದ ಚೆರ್ಕಳ-ಉಕ್ಕಿನಡ್ಕ ರಸ್ತೆ ಶೋಚನೀಯ

ಬದಿಯಡ್ಕ:  35 ಕೋಟಿ ರೂಪಾಯಿ ಖರ್ಚು ಮಾಡಿ ಎರಡು ವರ್ಷಗಳ ಹಿಂದೆ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಿದ ಚೆರ್ಕಳ-ಉಕ್ಕಿನಡ್ಕ ರಸ್ತೆ  ಶೋಚನೀಯ ಸ್ಥಿತಿಗೆ ತಲುಪಿದೆ.  ಇಬ್ಬರು ಗುತ್ತಿಗೆದಾರರು ಕೆಲಸ ನಡೆಸಿದರೂ ಅದು ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಮೂರನೇ ಗುತ್ತಿಗೆದಾರ  ಕಾಮಗಾರಿಯನ್ನು ವಹಿಸಿಕೊಂಡಿ ದ್ದರು. ಅವರು ಕೆಲಸ ಪೂರ್ತಿಗೊಳಿಸಿ ದಂತೆ ಮಾಡಿ ಮರಳಿದ್ದು, ಇದೀಗ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆಯೆಂದು ದೂರಲಾಗಿದೆ. ೩೫ ಕೋಟಿ ರೂಪಾಯಿ ವ್ಯಯಿಸಿ ಗುತ್ತಿಗೆದಾರರು  ಯಾವ ಕೆಲಸವನ್ನು ನಡೆಸಿದ್ದಾರೆಂದು ಆಯಾ ಸಂದರ್ಭದಲ್ಲಿ ನಿಗಾ ವಹಿಸುತ್ತಿದ್ದ ಲೋಕೋಪಯೋಗಿ, ಕಿಫ್‌ಬಿ ಅಧಿಕಾರಿಗಳು ಏನು ಮಾಡುತ್ತಿದ್ದರೆಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಚೆರ್ಕಳ-ಕಲ್ಲಡ್ಕ ರಸ್ತೆಯ ನಿರ್ಮಾಣ ಸಂದರ್ಭದಲ್ಲಿ  ಕಾಮಗಾರಿ ಪೂರ್ತಿಗೊಳಿಸಿದ ಕಲ್ಲಡ್ಕ-ಉಕ್ಕಿನಡ್ಕ ರಸ್ತೆಗೆ ಯಾವುದೇ ಹಾನಿ ಉಂಟಾಗಿಲ್ಲ. ಉಕ್ಕಿನಡ್ಕ ಮೆಡಿಕಲ್ ಕಾಲೇಜಿನಿಂದ ಚೆರ್ಕಳ ವರೆಗೆ ನಿರ್ಮಿಸಿದ ರಸ್ತೆ ಪೂರ್ಣ ಹಾನಿಗೀಡಾಗಿದೆಯೆಂದು ಸಿಪಿಎಂ ಬದಿಯಡ್ಕ ಟೌನ್ ಬ್ರಾಂಚ್ ಸೆಕ್ರೆಟರಿ ಹಾರಿಸ್ ಬಿ.ಡಿ.ಕೆ ಆರೋಪಿಸಿದ್ದಾರೆ. ಇದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗದ ಸ್ಥಿತಿಯಾಗಿದೆ. ಬೈಕ್ ಸವಾರರು ದಿನಂಪ್ರತಿ ಹೊಂಡಕ್ಕೆ ಬಿದ್ದು ಗಾಯಗೊಳ್ಳುತ್ತಿರುವು ದಾಗಿಯೂ ಅವರು ತಿಳಿಸಿದ್ದಾರೆ. ಜನರಿಂದ  ತೆರಿಗೆಯಾಗಿ ವಸೂಲಿ ಮಾಡುವ ಹಣವನ್ನು ಉಪಯೋಗಿಸಿ ನಿರ್ಮಿಸುವ ರಸ್ತೆಗಳು ಈ ಸ್ಥಿತಿಗೆ ತಲುಪಲು ಕಾರಣವೇನೆಂದು ಅವರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.  ಜನಸಂಚಾರ ಸುಗಮವಾಗಿ ನಡೆಯ ಬೇಕಾದಲ್ಲಿ ರಸ್ತೆಯ ಹೊಂಡಗಳನ್ನು ಶೀಘ್ರ ಮುಚ್ಚುಗಡೆಗೊಳಿಸಬೇಕಾಗಿದೆ. ಇಲ್ಲದಿದ್ದಲ್ಲಿ  ತೀವ್ರ  ಚಳವಳಿಗೆ ಮುಂದಾಗಬೇಕಾದೀತೆಂದು   ಕಿಫ್‌ಬಿ ಎಕ್ಸಿಕ್ಯೂಟಿವ್ ಇಂಜಿನಿಯರ್‌ಗೆ ನೀಡಿದ ಮನವಿಯಲ್ಲಿ ಹಾರಿಸ್ ತಿಳಿಸಿದ್ದಾರೆ.

ಚೆರ್ಕಳ-ಕಲ್ಲಡ್ಕ ರಸ್ತೆಯಲ್ಲಿ ಚೆರ್ಕಳ-ಉಕ್ಕಿನಡ್ಕ, ಉಕ್ಕಿನಡ್ಕ-ಕಲ್ಲಡ್ಕ ಎಂಬೀ ಭಾಗಗಳನ್ನು ರಬ್ಬರೈಸ್ಡ್ ಡಾಮರೀಕರಣ ನಡೆಸಲಾಗಿದೆ.  ಕಲ್ಲಡ್ಕ-ಉಕ್ಕಿನಡ್ಕ ಮಧ್ಯೆ 8 ಕಿಲೋ ಮೀಟರ್ ರಸ್ತೆ ರಬ್ಬರೈಸ್ಡ್ ಟಾರಿಂಗ್ ನಡೆಸಲು 19 ಕೋಟಿ ರೂಪಾಯಿ, ಉಕ್ಕಿನಡ್ಕ-ಚೆರ್ಕಳ   19 ಕಿಲೋ ಮೀಟರ್ ರಸ್ತೆಯನ್ನು ಇದೇ ಗುಣಮಟ್ಟದಲ್ಲಿ ಡಾಮರೀಕರಣ ನಡೆಸಲು 35 ಕೋಟಿ ರೂಪಾಯಿ ಕಿಫ್‌ಬಿ ನೀಡಿತ್ತು.  ಉಕ್ಕಿನಡ್ಕ-ಕಲ್ಲಡ್ಕ ರಸ್ತೆ ಮೂರು ವರ್ಷಗಳ ಹಿಂದೆಯೂ, ಉಕ್ಕಿನಡ್ಕ-ಚೆರ್ಕಳ ರಸ್ತೆಯ ಕಾಮಗಾರಿ ಎರಡು ವರ್ಷಗಳ ಹಿಂದೆಯೂ  ಪೂರ್ತಿಗೊಳಿಸಲಾಗಿದೆ.

You cannot copy contents of this page