ಕಣ್ಣೂರು ಎಡಿಎಂ ನವೀನ್‌ಬಾಬು ಆತ್ಮಹತ್ಯೆ ಪ್ರಕರಣ: ತನಿಖಾ ಹೊಣೆಗಾರಿಕೆಯಿಂದ ಜಿಲ್ಲಾಧಿಕಾರಿ ಹೊರಕ್ಕೆ
ಕಣ್ಣೂರು: ಕಣ್ಣೂರು ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ (ಎಡಿಎಂ) ನವೀನ್‌ಬಾಬುರ ಆತ್ಮಹತ್ಯೆ ಕಣ್ಣೂರು ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್‌ರನ್ನೂ ತೀವ್ರ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.
ಎಡಿಎಂ ಆತ್ಮಹತ್ಯೆಗೈದುದರ ಹಿನ್ನೆಲೆ ಬಗ್ಗೆ ನಡೆಸುತ್ತಿರುವ ತನಿಖೆಯ ಹೊಣೆಗಾರಿಕೆಯಿಂದ ಜಿಲ್ಲಾಧಿಕಾರಿ ಅರುಣ್ ಕೆ ವಿಜಯನ್ ರನ್ನು ದಿಢೀರ್ ಆಗಿ ಹೊರತುಪಡಿಸಿ ರಾಜ್ಯ ಕಂದಾಯ ಖಾತೆ ಸಚಿವ ಕೆ. ರಾಜನ್ ಆದೇಶ ಹೊರಡಿಸಿದ್ದಾರೆ. ತನಿಖೆಯ ಹೊಣೆಗಾರಿಕೆಯನ್ನು ಸಚಿವರು ರಾಜ್ಯ ಭೂಕಂದಾಯ ಜಂಟಿ ಕಾರ್ಯದರ್ಶಿ ಎ. ಗೀತಾರಿಗೆ ವಹಿಸಿಕೊಟ್ಟಿದ್ದಾರೆ.
ಜಿಲ್ಲಾಧಿಕಾರಿಯ ವಿರುದ್ಧ ನವೀನ್‌ಬಾಬುರ ಸಂಬಂಧಿಕರು ಇನ್ನೊಂದೆಡೆ ರಂಗಕ್ಕಿಳಿದಿದ್ದಾರೆ. ಜಿಲ್ಲಾಧಿಕಾರಿ ಮತ್ತು ನವೀನ್‌ಬಾಬು ನಡುವಿನ ಸೌಹಾರ್ದ ಉತ್ತಮವಾಗಿ ರಲಿಲ್ಲವೆಂದೂ ನವೀನ್ ಬಾಬುರಿಗೆ ಕಣ್ಣೂರಿನಿಂದ ತಮ್ಮ ಊರಿಗೆ ವರ್ಗಾವಣೆ ಲಭಿಸಿದ್ದರೂ ಅವರನ್ನು ಕಲೆಕ್ಟರೇಟ್‌ನಿಂದ ಬಿಡುಗಡೆಗೊಳಿಸುವ ವಿಷಯದಲ್ಲಿ ಜಿಲ್ಲಾಧಿಕಾರಿ ವಿಳಂ ಬಗೊಳಿಸುವ ನೀತಿ ಅನುಸರಿಸಿದ್ದರೆಂದು ನವೀನ್‌ರ ಮನೆಯವರು ದೂರಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಬಗ್ಗೆ ನವೀನ್ ಬಾಬುರ ಕುಟುಂಬ ಸದಸ್ಯರ ಇನ್ನಷ್ಟು ಹೇಳಿಕೆ ದಾಖಲಿಸಲು ತನಿಖಾಧಿಕಾರಿ ಮುಂದಾಗಿದ್ದಾರೆ. ಬಳಿಕ ವರ್ಗಾ ವಣೆಗೊಂಡ ನವೀನ್ ಬಾಬುರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಲು ಜಿಲ್ಲಾಧಿಕಾರಿ ತನ್ನನ್ನು ಕರೆದಿದ್ದಾರೆಂದು ಇನ್ನೊಂದೆಡೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿದ್ದು, ಮೊನ್ನೆಯಷ್ಟೇ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಆತ್ಮಹತ್ಯಾ ಪ್ರೇರಣೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಪಿ.ಪಿ. ದಿವ್ಯಾ ನಿರೀ ಕ್ಷಣಾ ಜಾಮೀನು ಕೋರಿ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದರು. ನವೀನ್ ಬಾಬುರನ್ನು ಆತ್ಮಹತ್ಯೆ ಯತ್ತ ಸಾಗಿಸಿದ ಲಂಚ ಆರೋಪದ ಬಗ್ಗೆ ಇನ್ನೊಂದೆಡೆ ವಿಜಿಲೆನ್ಸ್ ವಿಭಾಗವೂ ತನಿಖೆ ಆರಂಭಿಸಿದೆ. ವಿಜಿಲೆನ್ಸ್ ವಿಭಾಗದ ಕಲ್ಲಿಕೋಟೆ ಎಸ್ಪಿ ಅಬ್ದುಲ್ ರಜಾಕ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಕಣ್ಣೂರು ಚೆಂಗಳಾಯಿಯಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸುತ್ತಿರುವ ಪ್ರಶಾಂತ್ ಎಂಬವರು ನವೀನ್ ಬಾಬುರ ವಿರುದ್ಧ ಲಂಚ ಆರೋಪ ಹೊರಿಸಿ ಮುಖ್ಯಮಂತ್ರಿಗೆ ನೀಡಿದ ದೂರಿನಲ್ಲಿ ಅವರ ಸಹಿಯ ಬಗ್ಗೆ ಶಂಕೆ ಮೂಡಿಬಂದಿದೆ. ಆದ್ದರಿಂದ ಆ ದೂರಿನ ಬಗ್ಗೆಯೂ ತನಿಖಾ ತಂಡ ತನಿಖೆ ನಡೆಸುತ್ತಿದೆ.