ಕಾಡು ಹಂದಿಗಿರಿಸಿದ ಸ್ಫೋಟಕ ವಸ್ತು ಸಿಡಿದು ನಾಯಿ ಸಾವು: ಫಾರೆನ್ಸಿಕ್ ತಜ್ಞರು, ಶ್ವಾನದಳದಿಂದ ಪರಿಶೀಲನೆ ; ಪರಾರಿಯಾದ ಬೇಟೆಗಾರರಿಗಾಗಿ ಶೋಧ

ಕುಂಬಳೆ: ಕಾಡು ಹಂದಿಯನ್ನು ಕೊಲ್ಲಲು ಇರಿಸಿದ ಸ್ಫೋಟಕ ವಸ್ತು ಸಿಡಿದು ಸಾಕುನಾಯಿ ಸಾವಿಗೀಡಾದ ಹೇರೂರು ಮೀಪಿರಿಗೆ  ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್‌ಐ ಗಣೇಶ್ ನೇತೃತ್ವದಲ್ಲಿ  ಫಾರೆನ್ಸಿಕ್ ತಜ್ಞರು ಹಾಗೂ ಶ್ವಾನದಳ ತಲುಪಿ ಪರಿಶೀಲನೆ ನಡೆಸಿದ್ದಾರೆ. ಸ್ಫೋಟಕ ವಸ್ತು  ಸಿಡಿದ ಸ್ಥಳವನ್ನು ಪರಿಶೀಲಿಸಿ ಸ್ಫೋಟದ ತೀವ್ರತೆ ಬಗ್ಗೆ ಅವಲೋಕನ ನಡೆಸಲಾಯಿತು. ಬಳಿಕ ಕುಂಬಳೆ ಮೃಗಾಸ್ಪತ್ರೆಯಲ್ಲಿ ನಾಯಿಯ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರ ದಫನಗೈಯ್ಯಲಾಯಿತು. ಮೀಪಿರಿ ಬಳಿಯ ಕಾಡು ಪ್ರದೇಶದಲ್ಲಿ ಮೊನ್ನೆ ರಾತ್ರಿ ಸ್ಫೋಟಕ ವಸ್ತು ಸಿಡಿದು ಮೀಪಿರಿಯ ಕೊರಗಪ್ಪ ಎಂಬವರ ನಾಯಿ ಸಾವಿಗೀಡಾಗಿತ್ತು. ಈ ವಿಷಯ ತಿಳಿದು ನಾಗರಿಕರು ಸ್ಥಳಕ್ಕೆ ತಲುಪಿದಾಗ ಅದರಲ್ಲಿ ಕಾಡು ಹಂದಿ ಬೇಟೆಗಾರರು ನಡೆಸಿದ ಕೃತ್ಯವೆಂದು ತಿಳಿದುಬಂದಿತ್ತು. ಇದೇ ವೇಳೆ ಬೇಟೆ ಗಾರರು ಓಡಿ ಪರಾರಿಯಾಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಜೀಪೊಂದು ಕಂಡುಬಂದಿದ್ದು, ಅದನ್ನು ಬೇಟೆಗಾರರು ತಲುಪಿರುವುದಾಗಿ ಅಂದಾಜಿಸಿ ನಾಗರಿಕರು ಅದಕ್ಕೆ ತಡೆಯೊಡ್ಡಿದ್ದರು. ವಿಷಯ ತಿಳಿದು ಕುಂಬಳೆ ಪೊಲೀ ಸರು ತಲುಪಿ ಜೀಪು ಹಾಗೂ ಚಾಲಕನನ್ನು ಕಸ್ಟಡಿಗೆ ತೆಗೆದಿದ್ದರು.  ಬಳಿಕ ಜೀಪು ಚಾಲಕ ಕುಂಡಂಕುಳಿ ನಿವಾಸಿ ಉಣ್ಣಿಕೃಷ್ಣನ್ (48)ನನ್ನು ಬಂಧಿಸಿದ್ದರು. ಉಣ್ಣಿಕೃಷ್ಣನ್‌ನನ್ನು ನ್ಯಾಯಾಲಯದಲ್ಲಿ ಹಾಜರುಪಡಿ ಸಿದ್ದು, ಈ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ.  ಇದೇ ವೇಳೆ ಓಡಿ ಪರಾರಿಯಾದ ಬೇಟೆಗಾರರ ಪತ್ತೆಗೆ ಶೋಧ ನಡೆಯುತ್ತಿದೆಯೆಂದು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page