ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸಿದ ಪ್ರಕರಣ: ಆರೋಪಿಗೆ ಸಜೆ, ದಂಡ
ಕಾಸರಗೋಡು: ಕಾಲೇಜು ವಿದ್ಯಾರ್ಥಿನಿ ಯನ್ನು ಚುಡಾಯಿಸಿ, ಮೊಬೈಲ್ ಫೋನ್ನಲ್ಲಿ ಫೋಟೋ ತೆಗೆದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಎರಡು ವರ್ಷ ಸಜೆ ಮತ್ತು ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ.
ಕುಂಬಳೆ ಕೊಪಾಡಿ ನಿವಾಸಿ ಸಿ. ಸಾಗರ್ (೩೪) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಇದರ ಕುರಿತಾಗಿ ಆ ವಿದ್ಯಾರ್ಥಿನಿಯನ್ನು ದಾರಿಯಲ್ಲಿ ತಡೆದು ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ೨೦ ದಿನ ಸಜೆ ಮತ್ತು ೫೦೦ ರೂ. ಜುಲ್ಮಾನೆಯನ್ನೂ ನ್ಯಾಯಾಲಯ ವಿಧಿಸಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಐದು ದಿನಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
೨೦೧೮ ಜೂನ್ ೧೫ರಂದು ಮತ್ತು ಸೆಪ್ಟಂಬರ್ ೨೯ರಂದು ಆ ವಿದ್ಯಾರ್ಥಿನಿಯನ್ನು ಆರೋಪಿ ಚುಡಾಯಿಸಿರುವುದಾಗಿ ಪೊಲೀಸರಿಗೆ ಈ ಬಗ್ಗೆ ನೀಡಿದ ದೂರಿನಲ್ಲಿ ತಿಳಿಸಲಾಗಿತ್ತು. ಜೂನ್ ೧೫ರಂದು ಸಂಜೆ ವಿದ್ಯಾರ್ಥಿನಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಆರೋಪಿ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿ ಚುಡಾಯಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಳು. ಮಾತ್ರವಲ್ಲ ಆರೋಪಿ ಮೊಬೈಲ್ ಫೋನ್ನಲ್ಲಿ ಫೊಟೋ ಕ್ಲಿಕ್ಕಿಸಿದ್ದನು. ಬಳಿಕ ಸೆಪ್ಟಂಬರ್ ೨೯ರಂದು ಅದೇ ಸ್ಥಳದಲ್ಲಿ ಆಕೆಯನ್ನು ಮತ್ತೆ ಚುಡಾಯಿಸಿರುವುದಾಗಿಯೂ ದೂರಿನಲ್ಲಿ ಆಕೆ ಆರೋಪಿಸಿದ್ದಳು. ಅದರ ಪ್ರಕಾರ ಕುಂಬಳೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಕುಂಬಳೆ ಪೊಲೀಸ್ ಠಾಣೆಯ ಎಸ್ಐ ಆಗಿದ್ದ ಎಸ್.ಎ. ಸಂತೋಷ್ ಕುಮಾರ್ ಅವರು ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪ್ರೋಸಿಕ್ಯೂಟರ್ ಪಿ.ಆರ್. ಪ್ರಕಾಶ್ ಅಮ್ಮಣ್ಣಾಯ ನ್ಯಾಯಾಲಯದಲ್ಲಿ ವಾದಿಸಿದ್ದರು.