ಕಾಸರಗೋಡು ರೈಲು ನಿಲ್ದಾಣದಿಂದ ಇನ್ನು ಉಚಿತ ಸೈಕಲ್ ಸವಾರಿ
ಕಾಸರಗೋಡು: ರೈಲಿನಿಂದ ಇಳಿಯುವ ಪ್ರಯಾಣಿಕರಿಗೆ ರೈಲು ನಿಲ್ದಾಣದಿಂದ ಸೈಕಲ್‌ನಲ್ಲಿ ಉಚಿತವಾಗಿ ಕೆಎಸ್‌ಆರ್‌ಟಿಸಿ ಡಿಪ್ಪೋ ಹಾಗೂ ಕಾಸರಗೋಡು ಹೊಸ ಬಸ್ ನಿಲ್ದಾಣಕ್ಕೆ ತಲುಪಬಹುದು. ಚಿಕ್ಕಾಸು ಖರ್ಚಿಲ್ಲದೆ ಈ ಪ್ರಯಾಣ ಮಾಡಬಹುದು. ಎಲ್ಲಿ ಪ್ರಯಾಣ ಕೊನೆಗೊಳಿಸುತ್ತಾರೋ ಅಲ್ಲಿ ಸೈಕಲ್ ಇರಿಸಿ ಪ್ರಯಾಣಿಕನಿಗೆ ತೆರಳಬಹುದಾಗಿದೆ. ಮತ್ತೆ ಹಿಂತಿರುಗುವಾಗ ಆ ಸೈಕಲನ್ನು ಉಪಯೋಗಿಸಬಹುದು. ಕಾಸರಗೋಡು ನಗರಸಭೆ ಈ ಸೌಕರ್ಯವನ್ನು ಏರ್ಪಡಿಸುತ್ತಿದೆ. ಈ ಬಾರಿಯ ಮುಂಗಡಪತ್ರದಲ್ಲಿ ಕಾಸರಗೋಡು ನಗರಸಭೆ ಇದಕ್ಕಾಗಿ ೬ ಲಕ್ಷ ರೂ. ಮೀಸಲಿರಿಸಿದೆ. ಸವಾರರಿಗಾಗಿ ಮೊದಲ ಹಂತದಲ್ಲಿ 30 ಸೈಕಲ್‌ಗಳನ್ನು ಖರೀದಿಸಲಾಗುವುದು. ಸೈಕಲ್ ಸವಾರಿಗೆ ಪ್ರತ್ಯೇಕ ಟ್ರ್ಯಾಕ್ ಇಲ್ಲ. ಪ್ರಸ್ತುತವಿರುವ ರಸ್ತೆಯಲ್ಲೇ ಸೈಕಲ್ ಓಡಿಸಬೇಕು. ನಗರಸಭೆಯ ಪರಿಸರ ಸೌಹಾರ್ದ, ಎಲ್ಲರಿಗೂ ಆರೋಗ್ಯ ಎಂಬ ಆಶಯವನ್ನು ಮುಂದಿಟ್ಟು ಈ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ನಗರಸಭಾ ಅದ್ಯಕ್ಷ ಅಬ್ಬಾಸ್ ಬೀಗಂ ತಿಳಿಸಿದ್ದು, ಮುಂದಿನ ಎಪ್ರಿಲ್ ಮುಂಚಿತವಾಗಿ ಈ ಯೋಜನೆ ಜ್ಯಾರಿಗೊಳ್ಳಲಿದೆ.