ಕುಂಟಿಕಾನ ಮಠದ ಬ್ರಹ್ಮಕಲಶೋತ್ಸವಕ್ಕೆ ಚಾಲನೆ: ವಿವಿಧೆಡೆಗಳಿಂದ ಹರಿದು ಬಂತು ಹಸಿರುವಾಣಿ
ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ನಿನ್ನೆ ಆರಂಭಗೊಂಡಿದ್ದು, ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಿಂದ ಹಸಿರುವಾಣಿ ಮೆರವಣಿಗೆ ಕ್ಷೇತ್ರಕ್ಕೆ ತಲುಪಿತು. ಭಜನಾ ಮಂದಿರದ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ದೇವರಮೆಟ್ಟು, ಕುಂಟಿಕಾನ ದಾರಿಯಾಗಿ ಶ್ರೀ ಕ್ಷೇತ್ರಕ್ಕೆ ತಲುಪಿದ ಮೆರವಣಿಗೆಯನ್ನು ಬ್ರಹ್ಮಕಲಶೋತ್ಸವದ ಪದಾಧಿಕಾರಿಗಳು ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷ ಬಿ. ವಸಂತ ಪೈ ಬದಿಯಡ್ಕ ಆಡಳಿತ ಮೊಕ್ತೇಸರ ಶಂಕರನಾರಾಯಣ ಭಟ್ ಕೆ.ಎಂ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು, ಉಪಾಧ್ಯಕ್ಷ ಮಹಾಲಿಂಗೇಶ್ವರ ಭಟ್ ಪೆರ್ಣೆ, ಪ್ರಧಾನ ಕಾರ್ಯದರ್ಶಿ ಶ್ಯಾಮ ಭಟ್ ಕೆ.ಎಂ, ಫಿಟ್ ಪರ್ಸನ್ ಹಾಗೂ ಕೋಶಾಧಿಕಾರಿ ರಮಾನಾಥ ಶೆಟ್ಟಿ, ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ.ಬಿ. ಕುಳಮರ್ವ, ಸಮಿತಿಯ ಪದಾಧಿಕಾರಿಗಳು, ಭಗವದ್ಭಕ್ತರು ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಉಗ್ರಾಣ ಮುಹೂರ್ತವನ್ನು ಉದ್ಯಮಿ ಗೋಪಾಲಕೃಷ್ಣ ಪೈ ನೆರವೇರಿಸಿದರು.
ಇಂದು ಗಣಪತಿ ಹೋಮ, ವಿವಿಧ ತಾಂತ್ರಿಕ ಕಾರ್ಯಕ್ರಮಗಳು, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ ನಡೆಯಲಿದೆ. ಬೆಳಿಗ್ಗಿನಿಂದ ಸಂಜೆ ತನಕ ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಲಿದೆ. ಬೆಳಿಗ್ಗೆ ಸಂಗೀತ ಕಚೇರಿ ಜರಗಿತು. ಅಪರಾಹ್ನ ೨ರಿಂದ ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನ ನೀರ್ಚಾಲು ಇವರಿಂದ ಯಕ್ಷಗಾನ ತಾಳಮದ್ದಳೆ ವಾಮನ ಚರಿತ್ರೆ, ಸಂಜೆ ೭ರಿಂದ ವಿದುಷಿ ಯೋಗೀಶ್ವರೀ ಜಯಪ್ರಕಾಶ್ ಇವರ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ಪ್ರದರ್ಶನಗೊಳ್ಳಲಿದೆ.
ನಾಳೆ ಪ್ರಾತಃಕಾಲ ಗಣಪತಿ ಹೋಮ, ವಿವಿಧ ತಾಂತ್ರಿಕ ಕಾರ್ಯಕ್ರಮಗಳು, ಭಜನಾ ಸಂಘಗಳಿಂದ ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಬೆಳಿಗ್ಗೆ ೧೦ ಗಂಟೆಯಿಂದ ಕೀರ್ತನ ಕುಟೀರ ಕುಂಬಳೆ ಇವರಿಂದ ಹರಿಕಥೆ, ೧೧.೩೦ ಶಿಲ್ಪಾ ಪರಮೇಶ್ವರಿ, ಕು ಚಿನ್ಮಯಿ ಹಾಗೂ ಚಿರಾಗ್ ವಾಶೆಮನೆ ಇವರಿಂದ ಸಂಗೀತ ಕಾರ್ಯಕ್ರಮ, ಅಪರಾಹ್ನ ೨ರಿಂದ ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಸಂಘ ಬಾಯಾರುಪದವು ಇವರಿಂದ ಯಕ್ಷಗಾನ ತಾಳಮದ್ದಳೆ ದಕ್ಷಾಧ್ವರ, ಸಂಜೆ ೭ರಿಂದ ರಂಗಸಿರಿ ಸಾಂಸ್ಕೃತಿಕ ವೇದಿಕೆ ಬದಿಯಡ್ಕ ಇವರಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಇದೇ ವೇಳೆ ಮಾತೃಸಮಿತಿಯ ವತಿಯಿಂದ ಶ್ರೀ ದೇವರಿಗೆ ಪೂಜಾಸಾಮಗ್ರಿ, ಗಂಟೆಯನ್ನು ಸಮರ್ಪಿಸಿದರು.