ಕುಂಬಳೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಆರಿಕ್ಕಾಡಿ ಕಡವತ್ ಸಮೀಪ ಟೋಲ್ ಬೂತ್ ನಿರ್ಮಾಣಕ್ಕೆ ಸಂಬಂಧಿಸಿ ರಾಜಕೀಯ ಆರೋಪ-ಪ್ರತ್ಯಾರೋ ಪಗಳು ತೀವ್ರಗೊಂಡಿದೆ.
ನಾಗರಿಕರು ಹಾಗೂ ಯೂತ್ ಲೀಗ್ ಕಾರ್ಯಕರ್ತರು ಟೋಲ್ ಬೂತ್ ನಿರ್ಮಾಣಕ್ಕೆ ತಡೆಯೊಡ್ಡಿದ ಬೆನ್ನಲ್ಲೇ ಕಳೆದ ಶನಿವಾರ ಕುಂಬಳೆ ಪಂಚಾಯತ್ ಕಚೇರಿಯಲ್ಲಿ ಶಾಸಕ ಎಕೆಎಂ ಅಶ್ರಫ್ರ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಸಲಾಗಿತ್ತು. ಎರಡು ದಿನಗಳೊಳಗಾಗಿ ಟೋಲ್ ಬೂತ್ ನಿರ್ಮಾಣ ವಿರುದ್ಧ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿಯೂ, ಚಳವಳಿ ಘೋಷಣೆ ನಡೆಸುವುದಾಗಿ ಸಭೆಯಲ್ಲಿ ತಿಳಿಸಲಾಗಿತ್ತು. ಆದರೆ ದಿನಗಳು ಕಳೆದರೂ ಚಳವಳಿ ಘೋಷಣೆ ನಡೆದಿಲ್ಲ. ಮಾತ್ರವಲ್ಲದೆ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಜನಪ್ರ ತಿನಿಧಿಗಳು ಮುಂದಾಗಿಲ್ಲವೆಂದು ನಾಗರಿಕರು ಆರೋಪಿಸುತ್ತಿದ್ದಾರೆ. ಇದಕ್ಕೆ ಪ್ರತಿಭಟಿಸಿ ನಾಡಿನ ವಿವಿಧ ಭಾಗಗಳ ಜನರನ್ನು ಸೇರಿಸಿಕೊಂಡು ಚಳವಳಿ ಘೋಷಣೆ ನಡೆಸಲು ನಾಗರಿಕರು ಸಿದ್ಧತೆ ನಡೆಸುತ್ತಿದ್ದಾರೆ. ಕುಂಬಳೆ ಪಂಚಾಯತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶಾಸಕರ ವಿರುದ್ಧ ವಿವಿಧ ಪಕ್ಷಗಳ ಕಾರ್ಯಕರ್ತರಿಂದ ತೀವ್ರ ಟೀಕೆ ಕೇಳಿಬಂದಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ವೇಳೆ ಕುಂಬಳೆ ಪೇಟೆಗೆ ಪ್ರವೇಶಿಸಲು ವ್ಯವಸ್ಥೆ ಏರ್ಪಡಿಸದಿರುವುದು ಭಾರೀ ಸಂಕಷ್ಟ ಸೃಷ್ಟಿಸಿದೆ. ಅದರ ಬೆನ್ನಲ್ಲೇ ಟೋಲ್ ಬೂತ್ ನಿರ್ಮಿಸಿ ಜನರನ್ನು ಮತ್ತೊಂದು ಸಂಕಷ್ಟಕ್ಕೆ ಸಿಲುಕಿಸಲು ಪ್ರಯತ್ನ ನಡೆಯುತ್ತಿದೆ. ಅಂತಹ ಜನವಿರೋಧಿ ಚಟುವಟಿಕೆಗೆ ಜನಪ್ರತಿನಿಧಿಗಳು ಪ್ರೋತ್ಸಾಹ ನೀಡುತ್ತಿದ್ದಾರೆಂದೂ ನಾಗರಿಕರು ಆರೋಪಿಸುತ್ತಿದ್ದಾರೆ.







