ಕುಂಬಳೆ ಪಂ.ನ ಪ್ರಥಮ ಪ್ರವಾಸಿ ತಾಣ ಕಿದೂರು ಪಕ್ಷಿ ಗ್ರಾಮ ನಿರೀಕ್ಷಕರನ್ನು ಕಾಯುತ್ತಿದೆ
ಕುಂಬಳೆ: ಕೇರಳದ ಪ್ರವಾಸಿ ಭೂಪಟದಲ್ಲಿ ಸ್ಥಾನ ಪಡೆಯಲು ಹಾತೊರೆದು ನಿಂತಿರುವ ಕಿದೂರು ಪಕ್ಷಿ ಗ್ರಾಮ ಅರಿಕ್ಕಾಡಿಯಿಂದ 7 ಕಿಲೋಮೀಟರ್ ಒಳಭಾಗದಲ್ಲಿರುವ ಪ್ರದೇಶವಾಗಿದೆ. ಕುಂಬಳೆ ಪಂಚಾಯತ್‌ನ ಪ್ರಥಮ ಪ್ರವಾಸಿ ತಾಣವಾಗಿದೆ. ಪಕ್ಷಿ ನಿರೀಕ್ಷಕರ ಹಾಗೂ ಸಂಶೋಧಕರ ಇಷ್ಟ ಕೇಂದ್ರವಾದ ಕಿದೂರಿನಲ್ಲಿ ಇದುವರೆಗೆ 152 ಬಗೆಯ ವಿವಿಧ ಪಕ್ಷಿಗಳನ್ನು ಕಂಡುಹಿಡಿಯಲಾಗಿದೆ. ವಂಶ ನಾಶದ ಭೀತಿಯಲ್ಲಿರುವ ಬೂದು ತಲೆಯ ಬುಲ್‌ಬುಲ್, ಬಿಳಿ ಕಿರೀಟದ ಕೊಕ್ಕರೆ, ನೀರುಕಾಗೆ, ಬೆಳ್ಳಕ್ಕಿ ಮತ್ತು ಕತ್ತಿ ಕೊಕ್ಕರೆ ಮೊದಲಾದ 38 ವಿಧದ ವಲಸೆ ಹಕ್ಕಿಗಳು ಇಲ್ಲಿ ಕಂಡುಬAದಿವೆ.
ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕೊಂಬಿನ ಕೋಗಿಲೆ, ಬೂದು ತಲೆಯ ಬುಲ್ ಬುಲ್, ಗರುಡ ಪಿಕಳಾರ, ಕೆಂಪು ತಲೆಯ ಹಕ್ಕಿ, ಮತ್ತು ಬೂದು ಪಟ್ಟಿಯ ಪಾರಿವಾಳಗಳು ಇಲ್ಲಿ ಕಂಡುಬರುತ್ತವೆ. ಭಾರತದ ಈ ಪ್ರದೇಶದಲ್ಲಿ ಮಾತ್ರ ಕಂಡುಬರುವ ಹಳದಿ-ಪಟ್ಟಿಯ ಪಾರಿವಾಳವು ಇಲ್ಲಿಯ ಒಂದು ಪ್ರಮುಖ ಆಕರ್ಷಣೆಯಾಗಿದೆ. ವಿಶ್ವದ ಅತಿದೊಡ್ಡ ಪಕ್ಷಿ ದತ್ತಾಂಶ ಸಂಗ್ರಹವಾದ ‘ಇಬರ್ಡ್ಸ್’ನಲ್ಲಿ ಈ ಪ್ರದೇಶದಲ್ಲಿ ಕಂಡುಬAದ ವಿವಿಧ ಪಕ್ಷಿ ಪ್ರಭೇದಗಳನ್ನು ನೋಂದಾಯಿಸಲಾಗಿದೆ. ಅಲ್ಲದೆ ಹೆಚ್ಚಿನ ಪ್ರಭೇದಗಳನ್ನು ಕಂಡುಹಿಡಿಯಲು ನಿರೀಕ್ಷಣೆಗಳು ನಡೆಯುತ್ತಿವೆ. ಎಲ್ಲಾ ಸಮಯದಲ್ಲೂ ನೀರನ್ನು ಒದಗಿಸುವ ಕಜುರ್ ಪಳ್ಳಂ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಪಕ್ಷಿ ವೀಕ್ಷಕರು ಮತ್ತು ಸಂಶೋಧಕರು ಅನೇಕ ಸ್ಥಳಗಳಿಂದ ಇಲ್ಲಿಗೆ ಬರುತ್ತಿರುವುದರಿಂದ, ವಸತಿ ಸೌಕರ್ಯಗಳನ್ನು ಸುಧಾರಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ 60 ಲಕ್ಷ ರೂ. ವೆಚ್ಚದಲ್ಲಿ ಆಧುನಿಕ ಸೌಕರ್ಯಗಳಿಂದ ಒಡಗೋಡಿದ ಪ್ರವಾಸಿ ನಿಲಯವನ್ನು ನಿರ್ಮಿಸಲಾಗುತ್ತಿದೆ. ಪುರುಷರು, ಮಹಿಳೆಯರಿಗೆ ಪ್ರತ್ಯೇಕ ವಾಸದ ಕೊಠಡಿಗಳು, ಸಭಾಂಗಣ, ಶೌಚಾಲಯಗಳು, ಅಡುಗೆಮನೆ ಮತ್ತು ಕಚೇರಿ ಕೊಠಡಿಯಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಸತಿ ನಿಲಯದ ನಿರ್ಮಾಣ ಅಂತಿಮ ಹಂತದಲ್ಲಿದೆ. ಈ ಯೋಜನೆ ಜಾರಿಗೆ ಬರುವುದರೊಂದಿಗೆ ಕಿದೂರು ಕೇರಳದ ಮಾತ್ರವಲ್ಲದೆ, ವಿವಿಧ ಭಾಗಗಳ ಪಕ್ಷಿ ವೀಕ್ಷಕರು ಮತ್ತು ಪ್ರಕೃತಿ ಪ್ರಿಯರ ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಪರಿವರ್ತನೆಯಾಗಬಹುದು.
50 ಜನರಿಗೆ ವಾಸಿಸಲು ಸಾಧ್ಯವಿರುವ ವಸತಿ ನಿಲಯವನ್ನು ನಿರ್ಮಿಸಲಾಗಿದೆ. ಜಿಲ್ಲಾ ನಿರ್ಮಾಣ ಕೇಂದ್ರವು ನಿರ್ಮಾಣದ ಜವಾಬ್ದಾರಿಯನ್ನು ಹೊಂದಿದೆ. ಕಿದೂರು ಪಕ್ಷಿ ಗ್ರಾಮ ಒಂದು ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮಿದರೆ, ಸುತ್ತಮುತ್ತಲಿನ ಪ್ರದೇಶಗಳಾದ ಅರಿಕ್ಕಾಡಿ ಕೋಟೆ ಮತ್ತು ಅನಂತಪುರ ಸರೋವರ ದೇವಾಲಯಗಳು ಸಹ ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಲಿವೆ. ಕಿದೂರು ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಯ ‘ಪರಿಸರ ಪ್ರವಾಸೋದ್ಯಮ ಕೇಂದ್ರ’ ವಾಗಿ ಘೋಷಿಸುವ ಪ್ರಯತ್ನಗಳು ಪ್ರಗತಿಯಲ್ಲಿವೆ.