ಕುಂಬಳೆಯಲ್ಲಿ ಟೋಲ್‌ಗೇಟ್ ಸ್ಥಾಪಿಸಲಿರುವ ಯತ್ನ ಉಪೇಕ್ಷಿಸಬೇಕು- ಶಾಸಕ ಎಕೆಎಂ ಅಶ್ರಫ್

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಂಗವಾಗಿ ಕುಂಬಳೆಯಲ್ಲಿ ಟೋಲ್‌ಗೇಟ್ ಸ್ಥಾಪಿಸಲಿರುವ ಯತ್ನವನ್ನು ಅಂಗೀಕರಿಸಲು ಸಾಧ್ಯವಿಲ್ಲವೆಂದೂ, ಇದನ್ನು ಉಪೇಕ್ಷಿಸಬೇಕೆಂದು ಶಾಸಕ ಎಕೆಎಂ  ಅಶ್ರಫ್ ಆಗ್ರಹಿಸಿದರು. ಪ್ರಸ್ತುತ ಕೇರಳ ಕರ್ನಾಟಕ ಗಡಿ ಭಾಗವಾದ ತಲಪಾಡಿಯಲ್ಲಿ ಟೋಲ್‌ಗೇಟ್ ಇರುವಾಗ ಕೇವಲ ೨೦ ಕಿಲೋ ಮೀಟರ್ ದೂರದಲ್ಲಿ ಮತ್ತೊಂದು ಟೋಲ್ ಸಂಗ್ರಹ ನಡೆಸುವುದು ಪ್ರತಿಭಟನಾರ್ಹವೆಂದು ಅವರು ತಿಳಿಸಿದ್ದು, ಇದು ಜನರಿಗೆ ಸಂಕಷ್ಟ ತರುವ ಕ್ರಮವಾಗಿದೆ. ಕಾಸರಗೋಡಿನವರು ಹೆಚ್ಚಾಗಿ ಆಶ್ರಯಿಸುವ ಮಂಗಳೂರು ಭಾಗಕ್ಕೆ ಪ್ರಯಾಣಿಸಲು ೨೦ ಕಿಲೋ ಮೀಟರ್‌ನಲ್ಲಿ ಎರಡು ಕಡೆಗಳಲ್ಲಿ ಟೋಲ್ ನೀಡಬೇಕಾದ ಅಪೂರ್ವ ಸನ್ನಿವೇಶ ಇದರಿಂದ ಉಂಟಾಗಲಿದೆ. ೬೦ ಕಿಲೋ ಮೀಟರ್ ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ನಡೆಸಬೇಕಾಗಿದೆ ಎಂದಿರುವಾಗ ಕುಂಬಳೆಯಲ್ಲಿ ಟೋಲ್ ಗೇಟ್ ಸ್ಥಾಪಿಸುವುದು ಕಾನೂನುಬಾಹಿರವಾಗಿದೆ.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ತಿಗೊಳ್ಳುವುದಕ್ಕಿಂತ ಮುಂಚಿತವಾಗಿಯೇ ಸಂಬಂಧಪಟ್ಟವರು ಅವಸರದಲ್ಲಿ ಕಾನೂನು ವಿರುದ್ಧ ಟೋಲ್ ಗೇಟ್ ಸ್ಥಾಪಿಸುವ ಕ್ರಮ ಹಿಂತೆಗೆಯದಿದ್ದಲ್ಲಿ ಸಾರ್ವಜನಿಕರನ್ನು ಒಟ್ಟುಗೂಡಿಸಿ ತೀವ್ರ ಆಂದೋಲನಕ್ಕೆ ಮುಂದಾಗುವುದಾಗಿ ಶಾಸಕರು ನುಡಿದರು. ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯ ಲೋಕೋಪಯೋಗಿ ಇಲಾಖೆ ಸಚಿವ, ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಎಂಬಿವರಿಗೆ ಮನವಿ ನೀಡಿರುವುದಾಗಿ ಶಾಸಕರು ತಿಳಿಸಿದ್ದಾರೆ.

You cannot copy contents of this page