ಕೋಟೆಕಾರು ಸಹಕಾರ ಸಂಘದಲ್ಲಿ ನಡೆದ ದರೋಡೆ ಪ್ರಕರಣ: ಕೇರಳಕ್ಕೂ ತನಿಖೆ ವಿಸ್ತರಿಸಿದ ಕರ್ನಾಟಕ ಪೊಲೀಸರು; ಗೋಲ್ಡ್ ಬ್ಲ್ಯಾಕ್ ಮಾರ್ಕೆಟ್‌ನತ್ತ ನಿಗಾ 

ಉಳ್ಳಾಲ: ಉಳ್ಳಾಲ ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಕೆ.ಸಿ. ರೋಡ್ ಶಾಖೆಯಲ್ಲಿ ಕಳೆದ ಶನಿವಾರ  ಹಾಡಹಗಲೇ ನಡೆದ 12 ಕೋಟಿ ರೂ. ನಗ-ನಗದು ದರೋಡೆ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರುಕೇರಳಕ್ಕೂ ವಿಸ್ತರಿಸಿದ್ದಾರೆ.

ಈ ಪ್ರಕರಣದ ತನಿಖೆಗಾಗಿ ಎಂಟು  ವಿಶೇಷ ಪೊಲೀಸ್ ತಂಡಕ್ಕೆ ರೂಪು ನೀಡಲಾಗಿದೆ.  ಕೇರಳ ಮಾತ್ರವಲ್ಲದೆ ತಮಿಳುನಾಡು ಹಾಗೂ ಮುಂಬೈಗೂ ತನಿಖೆ ವಿಸ್ತರಿಸಲಾಗಿದೆ.  ಈ ವಿಶೇಷ ತನಿಖಾ ತಂಡದಲ್ಲಿ ಒಂದು ತಂಡ ತನಿಖೆಗಾಗಿ ಕೇರಳಕ್ಕೆ ಈಗಾಗಲೇ ಆಗಮಿಸಿದೆ ಎಂದು ಮೂಲಗಳು ತಿಳಿಸಿದೆ.

ಈ ದರೋಡೆ ಪ್ರಕರಣದಲ್ಲಿ ಕೆಲವು ಸ್ಥಳೀಯರ  ಸಹಾಯವೂ ದರೋಡೆಕೋರರಿಗೆ ಲಭಿಸಿದ ಶಂಕೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ದರೋಡೆಗಾಗಿ  ಬಳಸಲಾದ ಕಾರಿನ ಮಾಲಕ ತಮಿಳುನಾಡು ಮೂಲದ ವ್ಯಕ್ತಿಯಾಗಿರುವುದಾಗಿ ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಆದ್ದರಿಂದ ಆತನ ಪತ್ತೆಗಾಗಿ ವಿಶೇಷ ತಂಡ ತಮಿಳುನಾಡಿಗೂ ತೆರಳಿದೆ.

ಈ ದರೋಡೆಗೆ ಬಳಕೆಯಾದ ಕಾರು ತಲಪಾಡಿ ಟೋಲ್ ಬೂತ್ ಮೂಲಕ ಸಾಗುವ ದೃಶ್ಯ ಸಿಸಿಟಿವಿ ಯಲ್ಲಿ ಪತ್ತೆಯಾಗದಿದೆ. ಆ ಕಾರಿನಲ್ಲಿ ಇಬ್ಬರು ಮಾತ್ರವೇ ಇದ್ದರು.

ಕಾರು ಉಪ್ಪಳದಲ್ಲಿ ಸಾಗುವ ದೃಶ್ಯಗಳೂ ಪತ್ತೆಯಾಗಿವೆ. ದರೋಡೆ ಮಾಡಿದ ಚಿನ್ನವನ್ನು ಆ ತಂಡದವರು ಬೇರೆ ಕಾರಿಗೆ ಹೇರಿ ಸಾಗಿಸಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.  ಹಾಗಾಗಿ ಆ ಕಾರನ್ನು ಪತ್ತೆಹಚ್ಚಲು ಪೊಲೀಸರು ಮಂಗಳೂರು-ಉಡುಪಿ ಮಾರ್ಗದ ಸಿಸಿ ಟಿವಿಗಳ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ದರೋಡೆ ಕೃತ್ಯ ನಂತರ ಒಂದು ಕಾರು ಕಾಸರಗೋಡಿನತ್ತ ಸಾಗಿದರೆ ಇನ್ನೊಂದು ಕಾರು ಬಂಟ್ವಾಳದತ್ತ ಸಾಗಿ  ವಿಟ್ಲ ಮೂಲಕ ಕಾಸರಗೋಡಿನ ಗ್ರಾಮೀಣ ಪ್ರದೇಶಗಳಿಗೆ ತಲುಪಿ ಅಲ್ಲಿಂದ  ಬೇರೆ ಬೇರೆ ಕಾರುಗಳಲ್ಲಿ ಸಾಗಿ ಬಳಿಕ ಕೇರಳ ಸೇರಿರುವ ಸಾಧ್ಯತೆಯೂ ಇದೆ ಎಂಬ ಶಂಕೆ ಉಂಟಾಗಿದೆ. ಅದುವೇ ತನಿಖೆಯನ್ನು ಕೇರಳಕ್ಕೆ ವಿಸ್ತರಿಸಿರುವುದರ ಪ್ರಧಾನ ಹಿನ್ನೆಲೆಯಾಗಿದೆ.  ಅದಕ್ಕಾಗಿ ಕೇರಳ ಪೊಲೀಸರ ಸಹಾಯವನ್ನು ತನಿಖಾ ತಂಡ ಪಡೆದಿದೆ. ದರೋಡೆಕೋರರು ಕೇರಳದ ಅಜ್ಞಾತ ಸ್ಥಳದಿಂದ ಸಮುದ್ರ ಮಾರ್ಗವಾಗಿ ತಮಿಳುನಾಡಿಗೆ ತೆರಳಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಅದರಿಂದಾಗಿ ತಮಿಳುನಾಡು ಮಾತ್ರವಲ್ಲ ಕೇರಳ ಮತ್ತು ಮಹಾರಾಷ್ಟ್ರಗಳ  ಗೋಲ್ಡ್ ಬ್ಲಾಕ್ ಮಾರ್ಕೆಟ್‌ಗಳತ್ತವೂ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page