ಗಾಳಿ ಮಳೆ, ಕಡಲಬ್ಬರಕ್ಕೆ ಸಮುದ್ರದಲ್ಲಿ ಸಿಲುಕಿದ ಮೀನುಗಾರಿಕಾ ದೋಣಿ
ಕಾಸರಗೋಡು: ಗಾಳಿ ಮಳೆ ಮತ್ತು ಕಡಲಬ್ಬರದಿಂದಾಗಿ ಮುಂದೆ ಸಾಗಲಾರದೆ ಕಾರಗೋಡು ಲೈಟ್ ಹೌಸ್ ಬಳಿಯ ಸಮುದ್ರ ಕಿನಾರೆ ಬಳಿ ಸಮುದ್ರದಲ್ಲಿ ಸಿಲುಕಿಕೊಂಡ ಮೀನುಗಾರಿಕಾ ದೋಣಿ ಮತ್ತು ಅದರಲ್ಲಿದ್ದ್ದ ಆರು ಮಂದಿ ಬೆಸ್ತರನ್ನು ಕರಾವಳಿ ಪೊಲೀಸರು ಮತ್ತು ಸ್ಥಳೀಯ ಬೆಸ್ತರಿ ಸೇರಿ ರಕ್ಷಿಸಿದ ಘಟನೆ ನಡೆದಿದೆ.
ಸಾಧಾರಣವಾಗಿ ನೀಲೇಶರ ದಡದಲ್ಲಿ ನಿಲ್ಲಿಸಲಾಗುತ್ತಿರುವ ಮೀನುಗಾರಿಕಾ ಬೋಟ್‌ಗಳ ಪೈಕಿ ಮೂರು ಬೋಟ್‌ಗಳು ನಿನ್ನೆ ರಾತ್ರಿ ನೀಲೇಶ್ವರದತ್ತ ಸಾಗುತ್ತಿದ್ದ ದಾರಿ ಮಧ್ಯೆ ಅದರಲ್ಲಿ ಒಂದು ಬೋಟ್ ದಿಢೀರ್ ಆಗಿ ಸುರಿಯತೊಡಗಿದ ಭಾರೀ ಮಳೆ, ಬಿರುಗಾಳಿ ಮತ್ತು ಕಡಲಬ್ಬರಕ್ಕೆ ಸಿಲುಕಿ ಮುಂದಕ್ಕೆ ಸಾಗಲು ಸಾಧ್ಯವಾಗದೆ ಅದು ಅಲ್ಲೇ ಸಿಲುಕಿಕೊಂಡಿದೆ. ವಿಷಯ ತಿಳಿದ ಕಾಸರಗೋಡು ಕರಾವಳಿ ಪೊಲೀಸರು ಮತ್ತು ನೆಲ್ಲಿಕುಂಜೆ ಲೈಟ್ ಹೌಸ್ ಬಳಿಯ ಬೆಸ್ತರು ಗಾಳಿ ಮಳೆಯನ್ನು ಲೆಕ್ಕಿಸದೆ ನೇರವಾಗಿ ಸಮುದ್ರಕ್ಕಿಳಿದು ಸಮುದ್ರದಲ್ಲಿ ಸಿಲುಕಿಕೊಂಡಿದ್ದ ಆ ಬೋಟನ್ನು ಹಗ್ಗದ ಸಹಾಯದಿಂದ ತಮ್ಮ ಬೋಟ್‌ಗೆ ಕಟ್ಟಿ ಎಳೆದು ಅದನ್ನು ಕೊನೆಗೂ ಸುರಕ್ಷಿತವಾಗಿ ದಡ ಸೇರಿಸಿದರು. ಆ ಬೋಟ್‌ನಲ್ಲಿ ಆರು ಮಂದಿ ಬೆಸ್ತರಿದ್ದು, ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಯಿತು. ಬೋಟ್‌ನ್ನು ಬಳಿಕ ಕಾಸರಗೋಡು ಮೀನುಗಾರಿಕಾ ಬಂದರಿಗೆ ಸಾಗಿಸಿ ಅಲ್ಲಿರಿಸಲಾಗಿದೆ. ಆ ಬೋಟ್‌ನ ಜತೆಗಿದ್ದ ಇತರ ಎರಡು ಬೋಟ್‌ಗಳು ಬಳಿಕ ನೀಲೇಶರದತ್ತ ಸಾಗಿತು.