ಕಾಸರಗೋಡು: ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಡಿ. ಶಿಲ್ಪರನ್ನು ಕೇಂದ್ರ ಡೆಪ್ಯುಟೇಶನ್ ಕ್ರಮದಂತೆ ಸಿಬಿಐಯಲ್ಲಿ ನೇಮಕಾತಿ ನೀಡಲಾಗಿದೆ.
ಬೆಂಗಳೂರು ಎಚ್‌ಎಸ್‌ಆರ್ ಲೇಔಟ್ ನಿವಾಸಿಯಾಗಿರುವ ಡಿ. ಶಿಲ್ಪ ಅವರು ಇಲೆಕ್ಟ್ರೋನಿಕ್ಸ್ ಇಂಜಿನಿಯ ರಿಂಗ್ ಹಾಗೂ ಬಿಸಿನೆಸ್ ಅಡ್ಮಿನಿ ಸ್ಟ್ರೇಷನ್ ಪದವೀಧರೆಯಾಗಿದ್ದಾರೆ.
2016ರ ಐಪಿಎಸ್ ಬ್ಯಾಚ್‌ನ ಡಿ. ಶಿಲ್ಪರಿಗೆ 2019ರಲ್ಲಿ ಕಾಸರಗೋಡಿನ ಅಸಿಸ್ಟೆಂಟ್ ಪೊಲೀಸ್ ಸೂಪರಿಂಟೆಂಡೆಂಟ್ (ಎಎಸ್‌ಪಿ) ಆಗಿ ಮೊದಲ ನೇಮಕಾತಿ ನೀಡಲಾಗಿತ್ತು. 2020ರಲ್ಲೂ ಅವರು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಅವರನ್ನು ಇಲ್ಲಿಂದ ಬೇರೆಡೆಗೆ ವರ್ಗಾಯಿಸಲಾಗಿತ್ತು. ಆ ಬಳಿಕ ಅವರು ಪೊಲೀಸ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಪ್ರೊಕ್ಯೂಟ್‌ಮೆಂಟ್ (ಮೀಸಲಾತಿ) ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ ಜನರಲ್ ಆಗಿ ಸೇವೆ ಸಲಿಸುತ್ತಿದ್ದ ವೇಳೆ ಅವರನ್ನು 2024ರಲ್ಲಿ ಮತ್ತೆ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ವರ್ಗಾಯಿಸಲಾಗಿತ್ತು. ಹೀಗೆ ಅವರು ಕಾಸರಗೋಡಿನಲ್ಲಿ ಎಎಸ್‌ಪಿ ಹಾಗೂ ಎರಡು ಬಾರಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಅವರನ್ನು ಡೆಪ್ಯುಟೇಶನ್ ಮೇಲೆ ಸಿಬಿಐಯಲ್ಲಿ ನೇಮಕಾತಿ ನೀಡಲಾಗಿದೆ.
ಇದರಿಂದ ತೆರವುಗೊಂಡ ಕಾಸರಗೋಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಸ್ಥಾನದ ಉಸ್ತುವಾರಿ ಹೊಣೆಗಾರಿಕೆಯನ್ನು ಕಣ್ಣೂರು ರೂರಲ್ (ಗ್ರಾಮೀಣ) ಜಿಲ್ಲಾ ಪೊಲೀಸ್ ಅಧಿಕಾರಿ ಅನೂಜ್ ಪಾಲಿವಾಲ್‌ರಿಗೆ ವಹಿಸಿಕೊಡಲಾಗಿದೆ.