ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿಯಿಂದ ಅದಾಲತ್
ಬದಿಯಡ್ಕ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ನಗರ ಸಂದರ್ಶನದಂಗವಾಗಿ ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಮುಳಿಪರಂಬ ನಗರದ ೧೧ನೇ ವಾರ್ಡ್ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಕಾರಿ ಡಿ. ಶಿಲ್ಪಾ ನಿನ್ನೆ ಸಂದರ್ಶಿಸಿ ದೂರು ಪರಿಹಾರ ಅದಾಲತ್ ನಡೆಸಿದರು. ೧೦೦ಕ್ಕೂ ಅಧಿಕ ಮಂದಿ ಅದಾಲತ್ನಲ್ಲಿ ಭಾಗವಹಿಸಿ ತಮ್ಮ ದೂರುಗಳನ್ನು ಸಲ್ಲಿಸಿದರು. ಅದನ್ನು ಪರಿಶೀಲಿಸಿದ ಡಿ. ಶಿಲ್ಪಾ ಅಗತ್ಯದ ಪರಿಹಾರ ಕ್ರಮ ಕೈಗೊಳ್ಳುವಂತೆ ನಿರ್ದೇಶ ನೀಡಿದರು. ಇದರ ಹೊರತಾಗಿ ಸೈಬರ್ ಅಪರಾಧ ಪ್ರಕರಣಗಳು, ಮದ್ಯ ಹಾಗೂ ಮಾದಕದ್ರವ್ಯಗಳ ಸೇವನೆ ಸೃಷ್ಟಿಸುವ ದುಷ್ಪರಿಣಾಮಗಳ ಬಗ್ಗೆಯೂ ಮಾಹಿತಿ ನೀಡಿದರು. ಕಾಸರಗೋಡು ಸ್ಪೆಷಲ್ ಮೊಬೈಲ್ ಸ್ಕ್ವಾಡ್ ಡಿವೈಎಸ್ಪಿ ಪಿ. ಪ್ರೇಂ ಸದನ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದರು. ಬದಿಯಡ್ಕ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಧೀರ್ ಕೆ ಸ್ವಾಗತಿಸಿ, ೧೧ನೇ ವಾರ್ಡ್ ಸದಸ್ಯೆ ಸುಬೈದ ಮಾತನಾಡಿದರು. ಎಸ್ಸಿ ಪ್ರಮೋಟರ್ ಲೋಹಿತ್ ವಂದಿಸಿದರು.