ಜಿಲ್ಲಾ ಶಾಲಾ ವಿಜ್ಞಾನೋತ್ಸವಕ್ಕೆ ಚೆಮ್ನಾಡ್ನಲ್ಲಿ ಚಾಲನೆ
ಕಾಸರಗೋಡು: ಜಿಲ್ಲಾ ಶಾಲಾ ವಿಜ್ಞಾನೋತ್ಸವಕ್ಕೆ ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ಚಾಲನೆ ದೊರಕಿದೆ. ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಿಪಿಸಿಆರ್ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ವಿಜ್ಞಾನದ ಕುರಿತಾದ ಸಂದೇಶ ನೀಡಿದರು. ವಿಜ್ಞಾನೋತ್ಸವದ ಲಾಂಛನ ವಿನ್ಯಾಸಗೊಳಿಸಿದ ಶರತ್ ಇಟ್ಟುಮ್ಮಲ್ ಸಾಮಾಜಿಕ ಮಾಧ್ಯಮ ಪ್ರಚಾರಕ್ಕೆ ನೇತೃತ್ವ ನೀಡುತ್ತಿರುವ ಅಬ್ದುಲ್ ಹಮೀದ್ ಸೇರಿದಂತೆ ಹಲವರಿಗೆ ಈ ಸಂದರ್ಭದಲ್ಲಿ ಶಾಲಾ ಮೆನೇಜರ್ ಸಿ.ಟಿ. ಅಹಮ್ಮದಲಿ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಫಲಕಗಳನ್ನು ನೀಡಿದರು.
ಶಿಕ್ಷಣ ಉಪನಿರ್ದೇಶಕ ಟಿ.ವಿ. ಮಧುಸೂದನನ್, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಿ.ಎ. ಸೈಮಾ, ಜಿಲ್ಲಾ ಪಂಚಾಯತ್ ಸ್ಥಾಯ ಸಮಿತಿ ಅಧ್ಯಕ್ಷೆ ಗೀತಾಕೃಷ್ಣನ್ ಸೇರಿದಂತೆ ಹಲವರು ಮಾತನಾಡಿದರು.
ವಿಜ್ಞಾನೋತ್ಸವದ ಮೊದಲ ದಿನವಾದ ನಿನ್ನೆ 68 ವಿಭಾಗಗಳಲ್ಲಾಗಿ ವೃತ್ತಿ ಪರಿಚಯ ಮೇಳ ನಡೆಯಿತು. ಇದರಲ್ಲಿ 952 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಒಂಭತ್ತು ವಿಭಾಗಗಳಲ್ಲಾಗಿ ವಿಜ್ಞಾನೋತ್ಸವ ನಡೆಯುತ್ತಿದ್ದು, ಅದರಲ್ಲಿ 550 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಇನ್ನು ಐಟಿ ಕಲೋತ್ಸವದಲ್ಲಿ೧೬ ವಿಭಾಗಗಳಲ್ಲಾಗಿ 224 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಕಲೋ ತ್ಸವದಂಗವಾಗಿ ನಡೆಸಲಾಗುತ್ತಿರುವ ವೊಕೇಶನಲ್ ಎಕ್ಸ್ಪೋದಲ್ಲಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ 42 ಶಾಲೆಗಳಿಂದಾಗಿ 84 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಐಟಿ ಮೇಳದಲ್ಲಿ 146 ಅಂಕಗಳೊಂದಿಗೆ ಕಾಸರಗೋಡು ಶಿಕ್ಷಣ ಉಪಜಿಲ್ಲೆ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ. ಬೇಕಲ 116, ಚಿತ್ತಾರಿಕ್ಕಲ್ 114, ಚೆರ್ವತ್ತೂರು 106, ಹೊಸದುರ್ಗ 100, ಮಂಜೇಶ್ವರ ೯೫ ಮತ್ತು ಕುಂಬಳೆ ಶಿಕ್ಷಣ ಉಪಜಿಲ್ಲೆ ಈತನಕ 90 ಅಂಕ ಪಡೆದಿದೆ.
ಇನ್ನು ವಿಜ್ಞಾನೋತ್ಸವದಲ್ಲ್ಲೂ ಕಾಸರಗೋಡು ಶಿಕ್ಷಣ ಉಪಜಿಲ್ಲೆ 131 ಅಂಕದೊಂದಿಗೆ ಆಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ. ಉಳಿದಂತೆ ಚೆರ್ವತ್ತೂರು 123, ಕುಂಬಳೆ 108, ಬೇಕಲ 107, ಹೊಸದುರ್ಗ 98, ಮಂಜೇಶ್ವರ 89 ಮತ್ತು ಚಿತ್ತಾರಿಕ್ಕಲ್ 88 ಅಂಕದೊಂದಿಗೆ ಸಾಗುತ್ತಿದೆ.
ವೃತ್ತಿ ಪರಿಚಯ ಮೇಳದಲ್ಲಿ ಹೊಸದುರ್ಗ ಉಪಜಿಲ್ಲೆ 814 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಕಾಸರಗೋಡು ಉಪಜಿಲ್ಲೆ 999 ಅಂಕದೊಂದಿಗೆ ನಂತರದ ಸ್ಥಾನದಲ್ಲಿದೆ.