ಜಿಲ್ಲೆಯ ವಿವಿಧೆಡೆಗಳಲ್ಲಿ ಅಬಕಾರಿ ದಾಳಿ: ಮದ್ಯ, ಹುಳಿರಸ ವಶ
ಕಾಸರಗೋಡು: ಅಬಕಾರಿ ತಂಡ ಜಿಲ್ಲೆಯ ವಿವಿಧೆಡೆಗಳಲ್ಲಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಅನಧಿಕೃತ ಮದ್ಯ ಹಾಗೂ ಹುಳಿರಸ ವಶಪಡಿಸಿಕೊಂಡಿದೆ. ಬದಿಯಡ್ಕ ಎಕ್ಸೈಸ್ ರೇಂಜ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಪೆರಿಯಡ್ಕದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಐದು ಲೀಟರ್ ಅಕ್ರಮ ಸಾರಾಯಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಪ್ರಿವೆಂಟಿವ್ ಆಫೀಸರ್ ಗಳಾದ ಮಂಜುನಾಥ ಆಳ್ವ, ಸಿಇಒಗಳಾದ ಜನಾರ್ದನ ಎನ್, ವಿನೋದ್ ಕೆ, ಸದಾನಂದನ್ ಪಿ. ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು. ಕಳ್ಳಾರು ಪೋತ್ತನ್ ಕಡವಿನಲ್ಲಿ ಹೊಸದುರ್ಗ ಎಕ್ಸೈಸ್ ಸರ್ಕಲ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ರಾಜೀವನ್ ಎಂ.ರ ನೇತೃತ್ವದ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ೩.೨೪ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಳ್ಳಾರು ಕುನ್ನುಮ್ಮಲ್‌ನ ಅಜೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೆಳ್ಳರಿಕುಂಡ್ ತಾಯನ್ನೂರು ಚೇರಳಂನಲ್ಲಿ ಹೊಸದುರ್ಗ ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್ಸ್ ಪೆಕ್ಟರ್ (ಗ್ರೇಡ್)ರ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ ಅಕ್ರಮ ಸಾರಾಯಿ ತಯಾರಿಸಲೆಂದು ಸಿದ್ಧಪಡಿಸಿದ್ದ ೪೦ ಲೀಟರ್ ಹುಳಿರಸ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇನ್ನೊಂದೆಡೆ ನೀಲೇಶ್ವರ ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ಕೆ.ರ ನೇತೃತ್ವದ ತಂಡ ನಡೆಸಿದ ಕಾರ್ಯಾ ಚರಣೆಯಲ್ಲಿ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಐದು ಲೀಟರ್ ಕೇರಳ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶ್ರೀಜಿತ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ.