ದುಷ್ಕರ್ಮಿಗಳಿಗೆ ಇನ್ನು ತಪ್ಪಿಸಲಸಾಧ್ಯ: ಜಿಲ್ಲೆಯ 2060 ಸಿಸಿ ಟಿವಿಗಳ ಮ್ಯಾಪಿಂಗ್ ನಡೆಸಿದ ಪೊಲೀಸರು

ಕಾಸರಗೋಡು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ, ದುಷ್ಕೃತ್ಯ ಕಳವು, ಮದ್ಯ ಮತ್ತು ಮಾದಕ ವಸ್ತು ವ್ಯವಹಾರಗಳನ್ನು ಪತ್ತೆಹಚ್ಚಲು ಸಮಗ್ರ ಹೆಜ್ಜೆ ಎಂಬಂತೆ ಪೊಲೀಸರು ಜಿಲ್ಲೆಯ ಪ್ರಧಾನ ಕೇಂದ್ರಗಳ 2060 ಸಿಸಿ ಟಿವಿ ಕ್ಯಾಮರಾಗಳ ಮ್ಯಾಪಿಂಗ್ ನಡೆಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಈ ವಿಷಯ ತಿಳಿಸಿದ್ದಾರೆ.

ಜಿಲ್ಲೆಯ ಗಡಿ ಪ್ರದೇಶವಾದ ತಲಪ್ಪಾಡಿಯಿಂದ ಆರಂಭಗೊಂಡು ಕಾಲಿಕಡವಿನ ತನಕದ ಪ್ರದೇಶಗಳ ಸಿಸಿಟಿವಿ ಕ್ಯಾಮರಾಗಳನ್ನು ಮ್ಯಾಪಿಂಗ್‌ನಲ್ಲಿ ಒಳಪಡಿಸಲಾಗಿದೆ. ಇದರಂತೆ ಈ ಎಲ್ಲಾ ಸಿಸಿಟಿವಿ ಕ್ಯಾಮರಾಗಳ ಮೇಲೆ ಪೊಲೀಸರು ಸದಾ ತೀವ್ರ ನಿಗಾ ಇರಿಸುವರು. ಕಾನೂನು ಉಲ್ಲಂಘನೆ ನಡೆಸುವುದು ಪತ್ತೆಯಾದಲ್ಲಿ, ಅಂತಹವರನ್ನು ಪೊಲೀಸರು ಸೆರೆ ಹಿಡಿಯಲಿದ್ದಾರೆ.

ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಸ್ಥಾಪಿಸಿರುವ ಕ್ಯಾಮರಾಗಳ ಹೊರತಾಗಿ ಮನೆಗಳು, ವ್ಯಾಪಾರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಸೇರಿದಂತೆ ಎಲ್ಲಾ ಪ್ರಧಾನ ಕೇಂದ್ರಗಳ ಸಿಸಿಟಿವಿ ಕ್ಯಾಮರಾಗಳನ್ನು  ಮ್ಯಾಪಿಂಗ್ ಗೊಳಪಡಿಸಲಾಗಿದೆ. ಅಕ್ರಮ ಕೃತ್ಯಗಳು ಎಲ್ಲಿಯಾದರೂ ನಡೆದಲ್ಲಿ ಅದು ತಕ್ಷಣ ಪೊಲೀಸರ ಗಮನಕ್ಕೆ ಬರಲಿದ್ದು, ಅದರ ಆಧಾರದಲ್ಲಿ ತಪ್ಪೆಸಗುವವರನ್ನು ತಕ್ಷಣ ಸೆರೆ ಹಿಡಿಯುವ ಅಗತ್ಯದ ಕ್ರಮಗಳನ್ನು ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಎಲ್ಲಾ ಸಿಸಿಟಿವಿ ಕ್ಯಾಮರಾಗಳನ್ನೂ ಮುಂದೆ ಮ್ಯಾಪಿಂಗ್‌ನ ವ್ಯಾಪ್ತಿಗೊಳ ಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಜ್ಯಾರಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸದೇ ಇರುವ  ಶಾಲೆಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಅದನ್ನು ಸ್ಥಾಪಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಶಿಕ್ಷಕ-ರಕ್ಷಕ ಸಂಘಗಳ ಸಹಕಾರದೊಂದಿಗೆ ಇದನ್ನು ಸ್ಥಾಪಿಸಲಾಗುವುದು. ಶಾಲೆ ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನೂ ಕೇಂದ್ರೀಕರಿಸಿ ಮಾದಕದ್ರವ್ಯ ಮಾರಾಟ ದಂಧೆಯವರು ಕಾರ್ಯವೆಸಗುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇಂತಹ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page