ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಹೆದ್ದಾರಿಯ ಭದ್ರತಾ ಗೋಡೆಗೆ ಢಿಕ್ಕಿ
ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಪದೇ ಪದೇ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊನ್ನೆ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ರಸ್ತೆ ಬದಿಯ ಭದ್ರತಾಗೋಡೆಗೆ ಬಡಿದಿದೆ. ತಕ್ಷಣ ಬಸ್ ಅಲ್ಲೇ ನಿಂತಿರುವುದರಿಂದ ಭಾರೀ ದೊಡ್ಡ ದುರಂತ ಅದೃಷ್ಟವಶಾತ್ ತಪ್ಪಿದೆ. ಶನಿವಾರ ಸಂಜೆ ೩ ಗಂಟೆಗೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರ ಸಮೀಪದ ಸರ್ವೀಸ್ ರಸ್ತೆಯಲ್ಲಿ ಅಪಘಾತವುಂಟಾಗಿದೆ.
ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಬಸ್ ಸರ್ವೀಸ್ ರಸ್ತೆ ಮೂಲಕ ಕುಂಬಳೆ ಪೇಟೆಗೆ ಪ್ರವೇಶಿಸುತ್ತಿದ್ದಂತೆ ಅಪಘಾತಕ್ಕೀಡಾಗಿದೆ. ಅಪರಿಮಿತ ವೇಗದಲ್ಲಿ ಬಂದ ಬಸ್ ನಿಯಂತ್ರಣ ತಪ್ಪಿ ಭದ್ರತಾ ಗೋಡೆಗೆ ಬಡಿದಿದೆ. ಈ ವೇಳೆ ಬಸ್‌ನಲ್ಲಿ 50ರಷ್ಟು ಮಂದಿ ಪ್ರಯಾಣಿಕರಿದ್ದರು. ಗಾಯಗೊಂಡವರಿಗೆ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಕಳುಹಿಸಲಾಯಿತು. ಬಸ್‌ನ ಟಯರ್ ಸವೆದಿರುವುದು ಹಾಗೂ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವೆಂದು ಪ್ರಯಾಣಿಕರು ಹೇಳುತ್ತಿದ್ದಾರೆ.