ನಿರಂತರ ವಿದ್ಯುತ್ ಮೊಟಕು: ಉಪ್ಪಳ ವಿದ್ಯುತ್ ಕಚೇರಿಗೆ ಮುತ್ತಿಗೆ ಹಾಕಿದ ನಾಗರಿಕರು

ಉಪ್ಪಳ: ನಾಲ್ಕು ದಿನಗಳಿಂದ ನಿರಂತರವಾಗಿ ವಿದ್ಯುತ್ ವಿತರಣೆ ಮೊಟಕುಗೊಂಡು ಜನರು ಸಂಕಷ್ಟಕ್ಕೀಡಾದರೂ ದುರಸ್ತಿಗೆ ಮುಂದಾಗದ ಕೆಎಸ್‌ಇಬಿ ಅಧಿಕಾರಿಗಳ ಕ್ರಮವನ್ನು ಪ್ರತಿಭಟಿಸಿ ಉಪ್ಪಳದಲ್ಲಿ ನಾಗರಿಕರು ಕೆಎಸ್‌ಇಬಿ ಸೆಕ್ಷನ್ ಕಚೇರಿಗೆ ಮುತ್ತಿಗೆ ಹಾಕಿ  ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.  ಬಿಜೆಪಿ ನೇತಾರ, ಮಂಗಲ್ಪಾಡಿ ಪಂ. ಸದಸ್ಯ ವಿಜಯ ಕುಮಾರ್ ರೈ ನೇತೃತ್ವದಲ್ಲಿ  ಬಂದ್ಯೋಡು ಮಳ್ಳಂಗೈ, ತಿಂಬರ, ಮೂಸೋಡಿ, ಮಣಿಮುಂಡ ಸಹಿತ ವಿವಿಧ ಪ್ರದೇಶಗಳ ನಾಗರಿಕರು ನಿನ್ನೆ ಸಂಜೆ ಕೆಎಸ್‌ಇಬಿ ಕಚೇರಿಗೆ ತೆರಳಿ ತಮ್ಮ ಸಂಕಷ್ಟವನ್ನು ತಿಳಿಸಿದ್ದಾರೆ.  ನಿರಂತರವಾಗಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ಕೂಡಾ ತತ್ವಾರ ಎದುರಿಸಬೇಕಾದ ಪರಿಸ್ಥಿತಿ ಉಂಟಾಗಿದೆ.   ಕಳೆದ ನಾಲ್ಕು ದಿನಗಳಿಂದ  ಮಳೆ ಹಾಗೂ ಗಾಳಿಯಿಂದ ಮರಗಳು ಮುರಿದು ಬಿದ್ದು ವಿದ್ಯುತ್ ತಂತಿ ಹಾಗೂ ಕಂಬಗಳು ಹಾನಿಗೀಡಾಗುವುದರಿಂದ ವಿದ್ಯುತ್ ಸಂಪರ್ಕ ಮರುಸ್ಥಾಪಿಸಲು ವಿಳಂಬವಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಹಾನಿಗೀಡಾದ ಬಗ್ಗೆ ಹಾಗೂ ತಂತಿ ತುಂಡಾಗಿ ಬಿದ್ದ ಬಗ್ಗೆ ತಿಳಿಸಲು ಕಚೇರಿಗೆ ಫೋನ್ ಮಾಡಿದರೂ ಫೋನ್ ಎತ್ತಲು ಅಧಿಕಾರಿಗಳು ಮುಂದಾಗದಿರುವುದನ್ನು ನಾಗರಿಕರು ಪ್ರಶ್ನಿಸಿದ್ದಾರೆ.

ಇದೇ ವೇಳೆ  ಅಗತ್ಯದಷ್ಟು ನೌಕರ ರಿಲ್ಲ.  ಹಾಗಿರುವಾಗ ಸೆಕ್ಷನ್ ವ್ಯಾಪ್ತಿಯ ಸಾವಿರಾರು ಮಂದಿ ಗ್ರಾಹಕರು ಕರೆ ಮಾಡುತ್ತಿರುವಾಗ ಫೋನ್ ಎತ್ತುವು ದಾದರೂ ಹೇಗೆ ಎಂದು ಅಧಿಕಾರಿಗಳು ತಮ್ಮ ಸಮಸ್ಯೆಯನ್ನು ತಿಳಿಸಿದ್ದಾರೆ.   ಬಳಿಕ  ದುರಸ್ತಿ ಕಾಮಗಾರಿಯನ್ನು ಇಂದು ಪೂರ್ತಿಗೊಳಿಸಲು ಗುತ್ತಿಗೆ ನೀಡಲಾಗಿದೆಯೆಂದೂ ಅಧಿಕಾರಿಗಳು ತಿಳಿಸಿದ್ದಾರೆ. ಕೆಎಸ್‌ಇಬಿ ಕಚೇರಿಗೆ ನಾಗರಿಕರು ಮುತ್ತಿಗೆ ಹಾಕಿದ ವಿಷಯ ತಿಳಿದು ಪೊಲೀಸರು ಅಲ್ಲಿಗೆ ತಲುಪಿದ್ದರು.  ಬಳಿಕ ಪ್ರತಿಭಟನೆ ಗಾರರನ್ನು ಅವರು ಸಮಾಧಾನಪ ಡಿಸಿದರು. ಇಂದು ವಿದ್ಯುತ್ ಪೂರ್ಣವಾಗಿ ಮರುಸ್ಥಾಪಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ ನಾಗರಿಕರು ಅಲ್ಲಿಂದ ಮರಳಿದ್ದಾರೆ. ಇದೇ ವೇಳೆ  ವಿಜಯ ಕುಮಾರ್ ರೈ ನಿನ್ನೆ ಸಂಜೆ ವಿದ್ಯುತ್ ಕಂಬ, ತಂತಿಗಳು ತುಂಡಾಗಿ ಬಿದ್ದ ಪ್ರದೇಶಗಳಿಗೆ ಕೆಎಸ್‌ಇಬಿ ಅಧಿಕಾರಿಗಳನ್ನು ತಲುಪಿಸಿ ಮಾಹಿತಿ ನೀಡಿದರು. ಕೆಲವು ಕಾಮಗಾರಿಗಳನ್ನು ಆಗಲೇ ನಡೆಸಲಾಯಿತು. ಉಳಿದ ಕೆಲಸಗಳನ್ನು ಇಂದು ಪೂರ್ತಿಗೊಳಿ ಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page