ಪೇರಾಲ್ ಸರಕಾರಿ ಶಾಲೆ ವಿರುದ್ಧ ನಿಲ್ಲದ ಆಕ್ರಮಣ: ಹಾನಿ

ಕುಂಬಳೆ: ಮಕ್ಕಳಲ್ಲಿ ಜ್ಞಾನದಾಹವನ್ನು ತೀರಿಸಿ ಅರಿವು ಮೂಡಿಸುವ ವಿದ್ಯಾಲಯಗಳನ್ನು ಕಂಡಾಗ ಕೆಲವು ಸಮಾಜಕಂಟಕರಿಗೆ ತುರಿಕೆ ಆರಂಭಿಸುವುದೇಕೆ ಎಂಬ ಶಂಕೆಯ ಮಧ್ಯೆ ಮತ್ತೊಂದು ಶಾಲೆ ವಿರುದ್ಧ ಆಕ್ರಮಣ ನಡೆಸಲಾಗಿದೆ. ರಾತ್ರಿಯ ಮರೆಯಲ್ಲಿ ಪೇರಾಲ್ ಸರಕಾರಿ ಜ್ಯೂನಿಯರ್ ಬೇಸಿಕ್ ಶಾಲೆಯ ವಿರುದ್ಧ ಸಮಾಜ ದ್ರೋಹಿಗಳು ಆಕ್ರಮಣ ನಡೆಸಿದ್ದಾರೆ. ಶಾಲೆಯಲ್ಲಿ ನೆಟ್ಟು ಬೆಳೆಸಿದ ಕೃಷಿ ಹಾಗೂ ಹೂ ಸಸಿಗಳನ್ನು ನಾಶಪಡಿಸುತ್ತಿರುವುದಾಗಿ ದೂರಲಾಗಿದೆ.

ಕೃಷಿಭವನದಿಂದ ಹಾಗೂ ಇತರ ಕಡೆಗಳಿಂದ ಸಂಗ್ರಹಿಸಿದ ತರಕಾರಿ ಸಸಿ, ಬೀಜಗಳನ್ನು ಗೋಣಿ ಚೀಲದಲ್ಲಿ ಬೆಳೆಸಲಾಗಿತ್ತು. ಹೂವಿನ ಗಿಡಗಳನ್ನು ಕೂಡಾ ಇಲ್ಲಿ ಬೆಳೆಸಲಾಗಿತ್ತು. ಆದರೆ ಇಲ್ಲಿ ಹೂಕುಂಡಗಳನ್ನು ನಾಶಪಡಿಸುವುದು, ಗೇಟನ್ನು ಹಾನಿಗೊಳಿಸುವುದು, ಆವರಣಗೋಡೆಗಳಲ್ಲಿ ಅಶ್ಲೀಲ ಪದಗಳನ್ನು ಬರೆಯುವುದು, ಮಳೆ ನೀರು ಸಂಗ್ರಹ ಟ್ಯಾಂಕ್, ಕುಡಿಯುವ ನೀರಿನ ಪೈಪ್‌ಗಳ ಹಾನಿಗೊಳಿಸುವುದು ಮೊದಲಾಗಿ ಕಿಡಿಗೇಡಿಗಳ ಕೃತ್ಯ ಇಲ್ಲಿ ನಿತ್ಯ ಘಟನೆಯಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ. ಶಾಲೆ ವಿರುದ್ಧದ ಈ ರೀತಿಯಾದ ಆಕ್ರಮಣವನ್ನು ತಡೆಗಟ್ಟಲು, ಕಿಡಿಗೇಡಿಗಳ ಪತ್ತೆಗೆ ಶಾಲೆಯಲ್ಲಿ ಸಿಸಿ ಟಿವಿ ಸ್ಥಾಪಿಸಲು ಮೊತ್ತ ಮಂಜೂರು ಮಾಡಬೇಕೆಂಬ ಶಾಲಾ ಪಿಟಿಎ ಪದಾಧಿಕಾರಿಗಳು ನಿರಂತರ ಪಂಚಾಯತ್‌ಗೆ ಆಗ್ರಹಿಸಿದರೂ ಯಾವುದೇ ಫಲ ಉಂಟಾಗಿಲ್ಲವೆಂದು ಸ್ಥಳೀಯರು ಆರೋಪಿಸುತ್ತಾರೆ. ಈ ಬಗ್ಗೆ ಪೊಲೀಸರಿಗೂ ದೂರು ನೀಡಲು ಶಾಲಾ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ.

You cannot copy contents of this page