ಪೊರೋಟ, ಬೀಫ್ ಬೇಡಿಕೆಯೊಡ್ಡಿ ಯುವಕನಿಂದ ಆತ್ಮಹತ್ಯಾ ಬೆದರಿಕೆ

ಕಾಸರಗೋಡು: ಮಾರಕಾಯುಧದೊಂದಿಗೆ ನೆರೆಮನೆಯ ತಾರಸಿಗೆ ಹತ್ತಿ ಆತ್ಮಹತ್ಯಾಬೆದರಿಕೆ ಒಡ್ಡಿದ ಯುವಕನನ್ನು ಸ್ಥಳೀಯರು ಹಾಗೂ ಪೊಲೀಸರ ಪ್ರಯತ್ನದಿಂದ ಸೆರೆ ಹಿಡಿಯಲಾಗಿದೆ. ಆದಿತ್ಯವಾರ ಮಧ್ಯಾಹ್ನ 1.30ರ ವೇಳೆ ಕರಿಂದಳದ ಶ್ರೀಧರನ್ ಎಂಬಾತ ನೆರೆಮನೆಯ ತಾರಸಿಗೆ ಹತ್ತಿ ಪರಾಕ್ರಮ ತೋರಿಸಿದ ಯುವಕ. ನೆರೆಯ ಲಕ್ಷ್ಮಿ ಎಂಬವರ  ಮನೆಯ ತಾರಸಿಗೆ ಹತ್ತಿದ ಈತ ಕೈಯಲ್ಲಿ ಮಾರಕಾಯುಧವನ್ನು ಹಿಡಿದು ಆತ್ಮಹತ್ಯೆ ಬೆದರಿಕೆಯೊಡ್ಡಿದ್ದಾನೆ. ಸ್ಥಳೀಯರು ನೀಡಿದ ಮಾಹಿತಿಯಂತೆ ನೀಲೇಶ್ವರ  ಎಸ್‌ಐ ಕೆ.ವಿ. ಪ್ರದೀಪ್ ಹಾಗೂ ತಂಡ ಸ್ಥಳಕ್ಕೆ ತಲುಪಿದೆ. ಅವರು ಬಂದು ಎಷ್ಟೇ ಭಿನ್ನವಿಸಿದರೂ ಶ್ರೀಧರನ್ ಕೆಳಗಿಳಿಯಲು ಒಪ್ಪಲಿಲ್ಲ.

ಬೀಫ್ ಹಾಗೂ ಪೊರೋಟ ನೀಡಿದರೆ ಮಾತ್ರವೇ ಆತ್ಮಹತ್ಯೆಯಿಂದ ಹಿಂದೆ ಸರಿಯುವುದಾಗಿ ಆತ ಪೊಲೀಸರಲ್ಲಿ ತಿಳಿಸಿದ್ದಾನೆ. ಕೊನೆಗೆ ಸ್ಥಳೀಯರು ಹಾಗೂ ಪೊಲೀಸರು ಆ ಪರಿಸರದಲ್ಲೆಲ್ಲಾ ಬೀಫ್ ಮತ್ತು ಪೊರೋಟಕ್ಕಾಗಿ ಓಡಾಡಿದರೂ ಆದಿತ್ಯವಾರವಾದ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಮುಚ್ಚಲಾಗಿತ್ತು. ಕೊನೆಗೆ ಎಲ್ಲಿಂದಲೋ ಆಹಾರ ತಂದು ಅದನ್ನು ಶ್ರೀಧರನ್‌ಗೆ ತೋರಿಸಿ ಮಾತನಾಡುತ್ತಿದ್ದ ಮಧ್ಯೆ ರಹಸ್ಯವಾಗಿ ಹಿಂದಿನಿಂದ ತೆರಳಿ ಶ್ರೀಧರನ್‌ನನ್ನು ಹಿಡಿದು ಕೆಳಗಿಳಿಸಲಾಯಿತು. ಅಗ್ನಿಶಾಮಕ ದಳ ಸಹಿತ ನೆರವಿಗೆ ದಾವಿಸಿತ್ತು. ಕೆಳಗಿಳಿಸಿದ ಬಳಿಕ ಪೊಲೀಸರು ಆತನಿಗೆ ಮುನ್ನೆಚ್ಚರಿಗೆ ನೀಡಿದ್ದು, ಮುಂದೆ ಈ ರೀತಿಯ ಹಠಮಾರಿತನ ನಡೆಸಬಾರದೆಂದು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥತೆ ಹೊಂದಿದ್ದ ಶ್ರೀಧರನ್ ಈ ಮೊದಲು ಹಲವು ಬಾರಿ ಈ ಆತ್ಮಹತ್ಯಾಬೆದರಿಕೆ ಒಡ್ಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

You cannot copy contents of this page