ಬಾಲಕಿಗೆ ಲೈಂಗಿಕ ಕಿರುಕುಳ : ಆರೋಪಿಗೆ 137 ವರ್ಷ ಕಠಿಣ ಸಜೆ; 7.5 ಲಕ್ಷ ರೂ. ದಂಡ
ಕಾಸರಗೋಡು: ಪ್ರಾಯಪೂರ್ತಿ ಯಾಗದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಕಠಿಣ ಸಜೆ, ಅದರ ಜತೆಗೆ 137 ವರ್ಷ ಕಠಿಣ ಸಜೆ ಹಾಗೂ 7.5 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಮೀಯಪದವು ಮೂಡಂಬೈಲು ಕುಳವಯಲ್ ನಿವಾಸಿ ವಲ್ಲಿ ಡಿ’ಸೋಜಾ (47) ಎಂಬಾತನಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಮುರಮೇಶ್ ಚಂದ್ರಬಾನು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಆರೋಪಿ 28 ತಿಂಗಳು ಹೆಚ್ಚುವರಿ ಕಠಿಣ ಸಜೆ ಅನುಭವಿಸಬೇಕಾಗಿದೆ. 2020 ಮಾರ್ಚ್‌ನಲ್ಲಿ ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿತ್ತು. 16ರ ಹರೆಯದ ಬಾಲಕಿಯನ್ನು ಕಾರಿನಲ್ಲಿ ಕುಳೂರು ಮೀಯಪದವು ಪಾಲಡಿ ಎಂಬಲ್ಲಿರುವ ಜನವಾಸವಿಲ್ಲದ ಮನೆಗೆ ತಲುಪಿಸಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗ ದೌರ್ಜನ್ಯ ನಿಷೇಧ ಕಾನೂನು ಪ್ರಕಾರ ಕಾಯ್ದೆಗಳನ್ನು ಹೇರಿ ಶಿಕ್ಷೆ ವಿಧಿಸಲಾಗಿದೆ. ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದ ಇ. ಅನೂಪ್ ಕುಮಾರ್ ಪ್ರಕರಣದ ತನಿಖೆ ನಡೆಸಿದ್ದು ಎಸ್‌ಎಂಎಸ್ ಎಎಸ್ಪಿ ಆಗಿದ್ದ ವಿವೇಕ್ ಕುಮಾರ್ ಆರೋಪಿಯನ್ನು ಬಂಧಿಸಿದ್ದರು. ಎಸ್‌ಎಂಎಸ್ ಡಿವೈಎಸ್ಪಿ ಆಗಿದ್ದ ಹರಿಶ್ಚಂದ್ರ ನಾಯ್ಕ್ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಶನ್ ಪರವಾಗಿ ಸ್ಪೆಶಲ್ ಪಬ್ಲಿಕ್ ಪ್ರೋಸಿಕ್ಯೂಟರ್ ಎ.ಕೆ. ಪ್ರಿಯಾ ಹಾಜರಾಗಿದ್ದರು.