ಬಾಲಕಿಯ ಕೈ ಬೆರಳಿನ ಬದಲು ನಾಲಗೆ ಶಸ್ತ್ರಚಿಕಿತ್ಸೆ: ವೈದ್ಯನ ಅಮಾನತು
ಕಲ್ಲಿಕೋಟೆ: ಕೈ ಬೆರಳಿನ ಚಿಕಿತ್ಸೆಗಾಗಿ ತಲುಪಿದ ನಾಲ್ಕರ ಹರೆಯದ ಬಾಲಕಿಯ ನಾಲಗೆ ಶಸ್ತ್ರಚಿಕಿತ್ಸೆ ನಡೆಸಿದ ಕಲ್ಲಿಕೋಟೆ ಮೆಡಿಕಲ್ ಕಾಲೇಜು ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ| ಬಿಜೋನ್ ಜೋನ್ಸನ್ ಅಮಾನತುಗೊಳಗಾದ ವ್ಯಕ್ತಿ.ಚೆರುವಣ್ಣೂರು ಮಧುರ ಬಜಾಲ್ ನಿವಾಸಿ ದಂಪತಿಯ ಪುತ್ರಿಯಾದ ನಾಲ್ಕರ ಹರೆಯದ ಬಾಲಕಿಯ ಕೈಯ ೬ನೇ ಬೇರಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸುವಂತೆ ವೈದ್ಯರು ಸೂಚಿಸಿದರು. ಇದರಂತೆ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ತಲುಪಿದ ಬಾಲಕಿಯ ಕೈ ಬೆರಳಿನ ಬದಲು ನಾಲಗೆ ಕಟ್ಟು (ಟಂಗ್ ಟೈ) ಬದಲಾಯಿಸುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಟಂಗ್ ಟೈಗಾಗಿ ಬೇರೆಯೂ ಮಕ್ಕಳು ಆಸ್ಪತ್ರೆಗೆ ತಲುಪಿದ್ದರು. ಈ ಬಾಲಕಿಯೂ ಅದೇ ಚಿಕಿತ್ಸೆಗಾಗಿ ತಲುಪಿದ್ದಾಳೆಂದು ಭಾವಿಸಿ ಚಿಕಿತ್ಸೆ ನೀಡಲಾಗಿದೆ ಎನ್ನಲಾಗುತ್ತಿದೆ. ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಬಾಲಕಿಯನ್ನು ದಾದಿ ವಾರ್ಡ್‌ಗೆ ಕೊಂಡೊಯ್ಯುತ್ತಿದ್ದಾಗ ಬಾಯಿಯಲ್ಲಿ ಹತ್ತಿ ತುರುಕಿಸಿರುವುದು ಕಂಡು ಬಂದಿದೆ. ಈ ಬಗ್ಗೆ ವಿಚಾರಿಸಿದಾಗಲೇ ವಿಷಯ ಅರಿವಿಗೆ ಬಂದಿದೆ. ತಪ್ಪು ಅರಿವಾದೊಡನೆ ಬಾಲಕಿಗೆ ಮತ್ತೆ ಕೈ ಬೆರಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಬಾಲಕಿಯ ಹೆತ್ತವರು ನೀಡಿದ ದೂರಿನಂತೆ ವೈದ್ಯನ ವಿರುದ್ಧ ಕೇಸು ದಾಖಲಿಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ.