ಮಂಡಲಪೂಜೆ 26ರಂದು: ತಂಗ ಅಂಗಿ ಶೋಭಾಯಾತ್ರೆ ಆರಂಭ
ಶಬರಿಮಲೆ: ಈ ತಿಂಗಳ 26ರಂದು ನಡೆಯುವ ಮಂಡಲ ಪೂಜೆ ವೇಳೆ ಶ್ರೀ ಅಯ್ಯಪ್ಪ ಸ್ವಾಮಿಗೆ ತೊಡಿಸಲಿರುವ ತಂಗಅಂಗಿ (ಚಿನ್ನದೊಡವೆ) ಒಳಗೊಂಡ ರಥ ಶೋಭಾಯಾತ್ರೆ ಆರನ್ಮುಳ ಶ್ರೀ ಪಾರ್ಥಸಾರಥಿ ಕ್ಷೇತ್ರದಿಂದ ಪ್ರಯಾಣ ಹೊರಟಿದೆ. ವಿವಿಧ ಕ್ಷೇತ್ರಗಳಲ್ಲಿ ಸ್ವಾಗತದ ಬಳಿಕ ಶೋಭಾಯಾತ್ರೆ ಈ ತಿಂಗಳ ೨೫ರಂದು ಮಧ್ಯಾಹ್ನ 1.30ಕ್ಕೆ ಪಂಬಾಕ್ಕೆ ತಲುಪಲಿದೆ. ಬಳಿಕ ಪಂಬಾ ಗಣಪತಿ ಕ್ಷೇತ್ರದಲ್ಲಿ ಭಕ್ತರ ದರ್ಶನಕ್ಕಿರಿಸಲಾಗುವುದು. ಅಪರಾಹ್ನ 3ಕ್ಕೆ ತಂಗಅಂಗಿಯನ್ನು ಪ್ರತ್ಯೇಕ ಪೆಟ್ಟಿಗೆಯಲ್ಲಿರಿಸಿ ಗುರುಸ್ವಾಮಿಗಳು ಹೊತ್ತುಕೊಂಡು ಸನ್ನಿಧಾನಕ್ಕೆ ತೆರಳುವರು. ಸಂಜೆ ೫.೩೦ಕ್ಕೆ ಶರಂಕುತ್ತಿಗೆ ತಲುಪಲಿದೆ. ಅಲ್ಲಿಂದ ದೇವಸ್ವಂ ಮಂಡಳಿ ಅಧಿಕಾರಿಗಳು ಪಡೆದುಕೊಂಡು ಧ್ವಸ್ತಂಭವರೆಗೆ ತಲುಪುವರು. ಅಲ್ಲಿಂದ ತಂತ್ರಿವರ್ಯರು, ಅರ್ಚಕರು ಸನ್ನಿಧಾನಕ್ಕೆ ಕೊಂಡೊಯ್ದು 6.30ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸಿ ಮಹಾದೀಪಾರಾಧನೆ ನಡೆಸುವರು. 26ರಂದು ಮಧ್ಯಾಹ್ನ ಮಂಡಲಪೂಜೆ ನಡೆಯಲಿದೆ. ಮಂಡಲ ಕಾಲದ ತೀರ್ಥಾಟನೆ ಮುಗಿದು ಅಂದು ರಾತ್ರಿ 11ಕ್ಕೆ ಬಾಗಿಲು ಮುಚ್ಚಲಾಗುವುದು. ಬಳಿಕ ಮಕರಜ್ಯೋತಿ ಉತ್ಸವಕ್ಕಾಗಿ 30ರಂದು ಸಂಜೆ 5ಕ್ಕೆ ಬಾಗಿಲು ತೆರೆಯಲಾಗುವುದು. ಮಕರಜ್ಯೋತಿ ಉತ್ಸವ ಜನವರಿ 14ರಂದು ನಡೆಯಲಿದೆ.