ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿದ ಘಟನೆ: ತಲೆಮರೆಸಿಕೊಂಡಿದ್ದ ಆರೋಪಿ ಸಂಗೀತ ಮಧುರೆಯಿಂದ ಸೆರೆ
ಕಾಸರಗೋಡು: ಔಷಧಿ ಅಂಗಡಿಯಿಂದ ಔಷಧಿ ಖರೀದಿಸುತ್ತಿದ್ದ ಮಧ್ಯೆ ಮಗುವಿನ ಕುತ್ತಿಗೆಯಿಂದ ಚಿನ್ನದ ಸರ ಅಪಹರಿಸಿದ ಪ್ರಕರಣದಲ್ಲಿ ಯುವತಿ ಸೆರೆಯಾಗಿದ್ದಾಳೆ. ತಮಿಳುನಾಡು ಮಧುರೆ ನಿವಾಸಿ ಸಂಗೀತ (37)ಳನ್ನು ತಳಿಪರಂಬ ಎಸ್ಐ ದಿನೇಶನ್ ಕೊತೇರಿಯವರ ನೇತೃತ್ವದಲ್ಲಿ ಬಂಧಿಸಲಾಗಿದೆ. ಅಕ್ಟೋಬರ್ ೨೪ರಂದು ಘಟನೆ ನಡೆದಿದೆ. ತಳಿಪರಂಬ ಸಹಕಾರಿ ಆಸ್ಪತ್ರೆಯ ಮುಂಭಾಗದ ಮೆಡಿಕಲ್ ಶಾಪ್ನಿಂದ ಔಷಧಿ ಖರೀದಿಸುತ್ತಿದ್ದ ಸಯ್ಯಿದ್ ನಗರದ ಫಾಯಿದಾಳ ಪುತ್ರಿಯ ಕುತ್ತಿಗೆಯಿಂದ ಚಿನ್ನದ ಮಾಲೆಯನ್ನು ಅಪಹರಿಸಲಾಗಿತ್ತು. ಔಷಧಿ ಖರೀದಿಸಲೆಂಬ ನೆಪದಲ್ಲಿ ತಲುಪಿದ ಇಬ್ಬರು ಯುವತಿಯರು ಫಾಯಿದಾಳ ಹಿಂದೆ ಹಾಗೂ ಬದಿಯಲ್ಲಿ ನಿಂತು ಇತರರ ಗಮನ ಬೀಳದ ಸಂದರ್ಭದಲ್ಲಿ ಮಗುವಿನ ಕುತ್ತಿಗೆಯಿಂದ ಚಿನ್ನದ ಸರವನ್ನು ಅಪಹರಿಸಿದ್ದರು.
ಮಾಹಿತಿ ತಿಳಿದು ತಲುಪಿದ ಮಗುವಿನ ತಂದೆ ಉಸಾಮ ಮೂಸ ನೀಡಿದ ದೂರಿನಂತೆ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದ ಮಧ್ಯೆ ಯುವತಿಯರ ಬಗ್ಗೆ ಸೂಚನೆ ಲಭಿಸಿತ್ತು. ಇವರನ್ನು ಪತ್ತೆಹಚ್ಚಲು ಕಾಞಂಗಾಡ್ವರೆಗೂ, ಕಣ್ಣೂರು ಜಿಲ್ಲೆ ಸಂಪೂರ್ಣವಾಗಿ ಹುಡು ಕಾಟ ನಡೆಸಲಾಗಿತ್ತು. ವಿವಿಧ ಕಡೆಗಳ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿತ್ತು. ಕಣ್ಣೂರು ನಗರಠಾಣೆ ಎಸ್ಐ ರಂಜಿತ್ಗೆ ಲಭಿಸಿದ ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು ಈಕೆಯ ಅಡಗುದಾಣವನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.