ಮಧೂರು ಕ್ಷೇತ್ರದ ಬ್ರಹ್ಮಕಲಶ- ಮೂಡಪ್ಪ ಸೇವೆ ತಾಂತ್ರಿಕ ವಿಧಿಗಳಿಗೆ ಇಬ್ಬರು ತಂತ್ರಿವರ್ಯರ ಪೌರೋಹಿತ್ಯ
ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ಮೂಡಪ್ಪ ಸೇವೆ ನ್ಯಾಯಾಲಯದ ನಿರ್ದೇಶದಂತೆ ಇಬ್ಬರು ತಂತ್ರಿವರ್ಯರ ಪೌರೋಹಿತ್ಯದಲ್ಲಿ ನಡೆಸಲು ಸಂಬಂಧಪಟ್ಟವರ ಸಭೆಯಲ್ಲಿ ತೀರ್ಮಾನಿಸಲಾಯಿತು. ಬ್ರಹ್ಮಕಲಶ ಹಾಗೂ ಮೂಡಪ್ಪ ಸೇವೆ ಮಾರ್ಚ್ 27ರಿಂದ ಎಪ್ರಿಲ್ 7ರವರೆಗೆ ನಡೆಯಲಿದೆ. ಇದರಲ್ಲಿ ಮಾರ್ಚ್ 27ರಿಂದ ಎಪ್ರಿಲ್ 2ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ದೇರೇಬೈಲು ಶಿವಪ್ರಸಾದ್ ತಂತ್ರಿಯವರ ಪೌರೋಹಿತ್ಯದಲ್ಲೂ ಬಳಿಕ ಎಪ್ರಿಲ್ 2ರಿಂದ 7xರವರೆಗೆ ನಡೆಯುವ ಶ್ರೀ ಮಹಾಗಣಪತಿ ಮೂಡಪ್ಪ ಸೇವೆ ಉಳಿಯತ್ತಾಯ ವಿಷ್ಣು ಆಸ್ರರ ಪೌರೋಹಿತ್ಯದಲ್ಲೂ ನಡೆಸಲು ತೀರ್ಮಾನಿಸಲಾಯಿತು.
ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಬುಧವಾರ ಮಧೂರು ಅತಿಥಿಮಂದಿರದಲ್ಲಿ ನಡೆದ ಸಭೆಯಲ್ಲಿ ತಂತ್ರಿವರ್ಯರಾದ ಉಳಿಯತ್ತಾಯ ವಿಷ್ಣು ಆಸ್ರ, ದೇರೇಬೈಲು ಡಾ. ಶಿವಪ್ರಸಾದ್ ತಂತ್ರಿ, ದೇವಸ್ವಂ ಕಮಿಷನರ್ ಟಿ.ಸಿ. ಬಿಜು, ಅಸಿಸ್ಟೆಂಟ್ ಕಮಿಷನರ್ ಪ್ರದೀಪ್ ಕುಮಾರ್, ನ್ಯಾಯವಾದಿ ಬಾಲಕೃಷ್ಣನ್ ನಾಯರ್, ನ್ಯಾಯವಾದಿ ಉದಯ ಗಟ್ಟಿ, ಸತೀಶ್ ಸಿ., ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.