ಮನೆಯಲ್ಲಿ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಕಾಮುಕನ ಸೆರೆ
ಕೊಚ್ಚಿ: ಆಲುವಾದ ಕಿಳಾಟ್ ಎಡಪ್ಪಾರ ವೀಟಿಲ್ನಲ್ಲಿ ತಾಯಿ ಮತ್ತು ಸಹೋದರರ ಜತೆ ಮಲಗಿ ನಿದ್ರಿಸುತ್ತಿದ್ದ ಬಿಹಾರದ ವಲಸೆ ಕಾರ್ಮಿಕ ದಂಪತಿ ಪುತ್ರಿ ಎಂಟು ವರ್ಷದ ಬಾಲಕಿಯನ್ನು ನಿನ್ನೆ ಮುಂಜಾನೆ ೨ ಗಂಟೆಗೆ ಆಕೆಯ ಮನೆಯೊಳಗಿಂದಲೇ ಅಪಹರಿಸಿ ಸಮೀ ಪದ ಬಯಲಿಗೆ ಒಯ್ದು ಪೈಶಾಚಿಕವಾದ ರೀತಿಯಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದ ಆರೋಪಿಯಾದ ಕಾಮುಕನನ್ನು ಬಂಧಿಸುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ.
ತಿರುವನಂತಪುರ ಚೆಂಗಲ್ ವಂಚಿಕುಳಿ ಕಂಬಾರಕ್ಕೆಲ್ ವೀಟಿಲ್ನ ನಿವಾಸಿ ಹಾಗೂ ೧೮ರಷ್ಟು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯೂ ಆಗಿರುವ ಕ್ರಿಸ್ಟಿನ್ ರಾಜನ್ (ಕೋಕ್ ರಾಜನ್) (೨೭) ಬಂಧಿತನಾದ ಆರೋಪಿಯಾಗಿದ್ದಾನೆ.
ಲೈಂಗಿಕ ಕಿರುಕುಳಕ್ಕೊಳಗಾದ ಬಾಲಕಿಯ ಮನೆಗೆ ನಿನ್ನೆ ಮುಂಜಾನೆ ಬಂದ ಆರೋಪಿ ಮನೆ ಕಿಟಕಿ ಬಳಿ ಕೀಲಿ ಗೊಂಚಲು ತೆಗೆದು, ಅದನ್ನು ಬಳಸಿ ಮನೆ ಬಾಗಿಲು ತೆರೆದು ಒಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿ ಸಿಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿರುವುದಾಗಿ ತನಿಖೆಯಲ್ಲಿ ಸ್ಪಷ್ಟ ಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಹೊತ್ತು ಕೊಂಡು ಹೋಗುತ್ತಿರುವುದನ್ನು ನೆರೆಮನೆ ವಾಸಿಯೋರ್ವರು ಕಂಡಿದ್ದರು. ಅದಾದ ಬಳಿಕ ಅಲ್ಲೇ ಪಕ್ಕದ ಬಯಲಿನಲ್ಲಿ ಬಾಲಕಿ ಜೋರಾಗಿ ಕಿರುಚುವ ಶಬ್ದ ಕೇಳಿದಾಗ ನೆರೆಮನೆಯವರು ತಕ್ಷಣ ಅಲ್ಲಿಗೆ ದಾವಿಸಿ ನೋಡಿದಾಗ ಲೈಂಗಿಕ ದೌರ್ಜನ್ಯಕ್ಕೊಳಗಾದ ಗಾಯ ಗಳೊಂದಿಗೆ ಕಂಡು ಆಕೆಯನ್ನು ಮೊದಲು ಆಕೆಯ ಮನೆಗೆ ಕರೆತಂದು ಬಳಿಕ ಆಸ್ಪತ್ರೆಗೆ ಸಾಗಿಸಲಾಯಿತು.
ಅತ್ಯಾಚಾರವೆಸಗಿದ ಆರೋಪಿ ಕ್ರಿಸ್ಟಿನ್ ರಾಜನ್ ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಅಲ್ಪಾ ಮಾರ್ತಾಂಡ ವರ್ಮ ಸೇತುವೆ ಸಮೀಪದ ಪೊದೆಯಲ್ಲಿ ಅವಿತು ಕೊಂಡಿದ್ದನು. ಅಲ್ಲಿಂದ ಆತನನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆಗ ಆರೋಪಿ ನದಿಗೆ ಹಾರಿದ್ದಾನೆ. ಆ ಕೂಡಲೇ ಪೊಲೀಸರು ಆತನನ್ನು ಸೆರೆಹಿಡಿಯುವಲ್ಲಿ ಕೊನೆಗೂ ಸಫಲರಾದರು. ಕಳವು ಪ್ರಕರಣವೊಂದಕ್ಕೆ ಈ ಹಿಂದೆ ಬಂಧಿತನಾಗಿದ್ದ ಆರೋಪಿ ಕೆಲವು ದಿನಗಳ ಹಿಂದೆಯಷ್ಟೇ ಜೈಲಿನಿಂದ ಜಾಮೀನಿನಲ್ಲಿ ಹೊರ ಬಂದಿದ್ದನು. ಇದೇ ಆಲುವಾದಲ್ಲಿ ಕಳೆದ ಜುಲೈ ೨೯ರಂದು ಬಿಹಾರ ನಿವಾಸಿ ಗಳಾದ ದಂಪತಿಯ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಆಕೆಯನ್ನು ಕೊಲೆಗೈದ ಘಟನೆಯೂ ನಡೆದಿತ್ತು. ಅದರ ಬೆನ್ನಲ್ಲೇ ಇನ್ನೊಂದು ಬಾಲಕಿಯ ಮೇಲೆ ಈ ದೌರ್ಜನ್ಯ ನಡೆದಿದೆ.