ಕಾಸರಗೋಡು: ಮಾದಕ ದ್ರವ್ಯ ಮಾರಾಟ ಹಾಗೂ ಅದಕ್ಕೆ ನೇತೃತ್ವ ನೀಡುತ್ತಿರುವ ವಲಸೆ ಕಾರ್ಮಿಕರ ವಿರುದ್ಧ ಜಿಲ್ಲೆಯಲ್ಲಿ ಪೊಲೀಸರು ಕಠಿಣ ಕ್ರಮ ಆರಂಭಿಸಿದ್ದಾರೆ. ಇದರ ಪೂರ್ವಭಾವಿಯಾಗಿ ಇಂತಹ ವಲಸೆ ಕಾರ್ಮಿಕರಿಗೆ ವಾಸಿಸಲು ಬಾಡಿಗೆಗೆ ಕ್ವಾರ್ಟರ್ಸ್ ನೀಡುತ್ತಿರುವ ಕಟ್ಟಡಗಳ ಮಾಲಕರಿಗೆ ಪೊಲೀಸರು ನೋಟೀಸು ಜ್ಯಾರಿಗೊಳಿಸುವ ಕ್ರಮಕ್ಕೂ ಚಾಲನೆ ನೀಡಿದ್ದಾರೆ.
ಮಾದಕದ್ರವ್ಯ ಮಾತ್ರವಲ್ಲ ಜಿಲ್ಲೆ ಯಲ್ಲಿ ಹಲವು ವಲಸೆ ಕಾರ್ಮಿಕರು ಅನಧಿಕೃತವಾಗಿ ವಾಸಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಅವರು ವಾಸಿಸುತ್ತಿರುವ ಕ್ವಾರ್ಟರ್ಸ್ಗಳ ಮಾಲಕರಿಗೂ ಪೊಲೀಸರು ನೋಟೀಸ್ ಜ್ಯಾರಿಗೊಳಿಸತೊಡಗಿದ್ದಾರೆ. ಕೆಲವು ವಲಸೆ ಕಾರ್ಮಿಕರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮಾದಕದ್ರವ್ಯ ಮಾರಾಟ ನಡೆಯುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಇಂತಹ ಕ್ರಮ ಆರಂಭಿಸಿದ್ದಾರೆ.