ಮೂರು ವರ್ಷಗಳಿಂದ ಬಿಸಿಲು- ಮಳೆಗೆ ನಿಂತು ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು: ಪಂಚಾಯತ್‌ನಿಂದ ಮೌನ

ಬದಿಯಡ್ಕ: ಕಾಂಕ್ರೀಟ್ ತುಂಡಾಗಿ ಬಿದ್ದು ಇಬ್ಬರು ಗಾಯಗೊಂಡ ಹಿನ್ನೆಲೆಯಲ್ಲಿ ಮುರಿದು ತೆಗೆದ ಬಸ್ ಪ್ರಯಾಣಿಕರ ತಂಗುದಾಣವನ್ನು ಪುನರ್ ನಿರ್ಮಿಸಲು ಕ್ರಮವುಂಟಾಗಿಲ್ಲ. ಇದರ ಪರಿಣಾಮವಾಗಿ ಪ್ರಯಾಣಿಕರಿಗೆ ಬಸ್‌ಗಾಗಿ ಕಾದು ನಿಲ್ಲಲು ಸೌಕರ್ಯವಿಲ್ಲದಂತಾಗಿದೆ. ಇದನ್ನು ಪ್ರತಿಭಟಿಸಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ಬದಿಯಡ್ಕ ಅವರ ನೇತೃತ್ವದಲ್ಲಿ ನಾಗರಿಕರು ಹೊಸ ತಂಗುದಾಣ ನಿರ್ಮಿಸಲು ನಿರ್ಧರಿಸಿದ್ದಾರೆ.

ಪಂಚಾಯತ್ ಅಧ್ಯಕ್ಷೆಯ ವಾರ್ಡ್ ಆಗಿರುವ ಬೀಜಂತಡ್ಕದಲ್ಲಿ ಬಸ್ ಪ್ರಯಾಣಿಕರ ತಂಗುದಾಣದ ಸಮಸ್ಯೆ ಎದುರಾಗಿದೆ. ಇದರಿಂದ ಪ್ರಯಾಣಿಕರು ಬಿಸಿಲು-ಮಳೆಗೆ ರಸ್ತೆ ಬದಿಯಲ್ಲೇ ನಿಂತು ಬಸ್‌ಗಾಗಿ ಕಾಯಬೇಕಾಗಿದೆ. ಚೆರ್ಕಳ- ಕಲ್ಲಡ್ಕ ರಸ್ತೆಯ ಈ ಪ್ರದೇಶದಲ್ಲಿ ಎದುರಾಗಿರುವ  ಸಮಸ್ಯೆಯನ್ನು ವಿವರಿಸಿ ನಾಗರಿಕರು ಪಂಚಾಯತ್ ಅಧ್ಯಕ್ಷೆ ಹಾಗೂ ಅಧಿಕಾರಿಗಳಿಗೆ ಮೂರು ವರ್ಷಗಳಿಂದ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೂ ಹೊಸ ಬಸ್ ತಂಗುದಾಣ ನಿರ್ಮಾಣಕ್ಕೆ ಕ್ರಮ ಉಂಟಾಗದಿರುವುದರಿಂದ ಇದೀಗ ನಾಗರಿಕರಿಂದಲೇ ಹಣ ಸಂಗ್ರಹಿಸಿ ತಂಗುದಾಣ ನಿರ್ಮಿಸಲು ನಿರ್ಧರಿಸಲಾಗಿದೆ. ನಾಗರಿಕರು ಹಣ ಖರ್ಚು ಮಾಡುವುದಾದರೆ ಬಸ್ ತಂಗುದಾಣ ನಿರ್ಮಿಸಲು ಅನುಮತಿ ನೀಡಲಾಗುವುದೆಂದು ಲೋ ಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆ ಬಗ್ಗೆ ಪಂಚಾಯತ್ ಯಾವುದೇ ಪ್ರತಿಕ್ರಿಯೆ ನೀಡಲು ಮುಂದಾಗಿಲ್ಲ. ಆದ್ದರಿಂದ ಜನಪರ ಸಮಿತಿಗಾಗಿ ಸಾಮಾಜಿಕ ಕಾರ್ಯಕರ್ತ ಹಾರಿಸ್ ಕಿಫ್‌ಬಿ ಅಧಿಕಾರಿಗಳನ್ನು ಸ್ಥಳಕ್ಕೆ ತಲುಪಿಸಿ ವಿಷಯ ತಿಳಿಸಿದ್ದಾರೆ. ರಸ್ತೆ ಹಾಗೂ ಪ್ರಯಾಣಿಕರಿಗೆ ಭವಿಷ್ಯದಲ್ಲಿ ಯಾವುದೇ ತೊಂದರೆ ಎದುರಾಗದ ರೀತಿಯಲ್ಲಿ ತಂಗುದಾಣ ನಿರ್ಮಿಸಲಿರುವ ಸಲಹೆಗಳನ್ನೂ ಅಧಿಕಾರಿಗಳು ನೀಡಿದ್ದಾರೆ. ಇದರ ಆಧಾರದಲ್ಲಿ ತಂಗುದಾಣ ನಿರ್ಮಿಸುವ ನಿರ್ಧಾರದೊಂದಿಗೆ ಮುಂದೆ ಸಾಗಲು ನಾಗರಿಕರು ತೀರ್ಮಾನಿಸಿದ್ದಾರೆ.

You cannot copy contents of this page