ಯುವಕನ ಅನುಮಾನಾಸ್ಪದ ಸಾವು ತಾಯಿ, ನೆರೆಮನೆ ನಿವಾಸಿ ಕಸ್ಟಡಿಗೆ
ಅರ್ಲಪದವು: ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೆಟ್ಟಂಪಾಡಿ ಸಮೀಪದ ಪಾರೆ ಎಂಬಲ್ಲಿ ಚೇತನ್ (33) ಎಂಬ ಯುವಕ ಸಾವನ್ನಪ್ಪಿದ್ದು, ಈತನ ತಾಯಿ ಯುವಕ ನೇಣು ಬಿಗಿದು ಮೃತಪಟ್ಟಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಮೃತದೇಹದಲ್ಲಿ ಕಂಡುಬಂದ ಗಾಯಗಳಲ್ಲಿ ಶಂಕೆಗೊಂಡ ಪೊಲೀಸರು ಅನುಮಾನಾಸ್ಪದ ಸಾವೆಂದು ಕೇಸು ದಾಖಲಿಸಿದ್ದಾರೆ.
9ರಂದು ರಾತ್ರಿ ಮದ್ಯ ಸೇವಿಸಿ ಬಂದಿದ್ದ ಚೇತನ್ ತಾಯಿ ಜೊತೆ ಜಗಳವಾಡಿ ಪಕ್ಕದ ಮನೆಯ ಯೂಸಫ್ ಎಂಬವರ ಮನೆಗೆ ತೆರಳಿ ಗಲಾಟೆ ನಡೆಸಿದ್ದನೆನ್ನಲಾಗಿದೆ. ನಂತರ ಆ ಮನೆಯ ಯೂಸಫ್ ಎಂಬವರು ಚೇತನ್‌ನ ತಾಯಿ ಉಮಾವತಿವವರಿಗೆ ಫೋನ್ ಮಾಡಿ ತಿಳಿಸಿದ್ದು, ಬಳಿಕ ಅವರಿಬ್ಬರು ಸೇರಿ ಚೇತನ್‌ನ್ನು ಸಂಕೋಲೆಯಲ್ಲಿ ಬಿಗಿದು ಎಳೆದುಕೊಂಡು ಹೋಗಿರುವುದಾಗಿ ಹೇಳಲಾಗಿದೆ. ಈ ವೇಳೆ ಕುತ್ತಿಗೆ ಬಿಗಿದು ಚೇತನ್ ಸಾವಿಗೀಡಾಗಿರಬೇಕೆಂದು ಶಂಕಿಸಲಾಗಿದೆ. ಇದರಂತೆ ಚೇತನ್‌ನ ತಾಯಿ ಮತ್ತು ನೆರೆಮನೆ ನಿವಾಸಿ ಯೂಸಫ್‌ರನ್ನು ಪೊಲೀಸರು ಕಸ್ಟಡಿಗೆ ತೆಗೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ಕೊಂಡುಹೋಗಲಾಗಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.